Thursday, December 1, 2022
spot_img
Homeಸುದ್ದಿಸ್ವಚ್ಛ ಕಾರ್ಕಳ ಬ್ರಿಗೇಡ್‌ನಿಂದ ಸ್ವಚ್ಛ ಮಾರ್ಗಂ ಅಭಿಯಾನ

ಸ್ವಚ್ಛ ಕಾರ್ಕಳ ಬ್ರಿಗೇಡ್‌ನಿಂದ ಸ್ವಚ್ಛ ಮಾರ್ಗಂ ಅಭಿಯಾನ

ರಸ್ತೆ ಬದಿಯ ಗಿಡಗಂಟಿ, ತ್ಯಾಜ್ಯ ಸ್ವಚ್ಛಗೊಳಿಸುವ ಕಾರ್ಯ

ಕಾರ್ಕಳ: ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡ ಆಯಾ ಪ್ರದೇಶದ ನಿವಾಸಿಗಳನ್ನು ಆಹ್ವಾನಿಸಿ ಮತ್ತು ಅವರನ್ನು ಒಳಗೊಂಡಂತೆ ಸ್ವಚ್ಛ ಮಾರ್ಗಂ ಎಂಬ ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದೆ. ಆಯಾ ಪ್ರದೇಶದ ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲು ಮತ್ತು ಅದರ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಈ ಅಭಿಯಾನ ತೆಗೆದುಕೊಳ್ಳುತ್ತದೆ.
ಭಾನುವಾರ ದಾನಶಾಲೆ ಮುಖ್ಯರಸ್ತೆಯಲ್ಲಿ 25 ಮನೆಗಳ ನಿವಾಸಿಗಳೊಂದಿಗೆ ಸೇರಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಸದಸ್ಯರಾದ ಎಂ. ಕೆ. ವಿಪುಲ್ ಮತ್ತು ಸುನಿಲ್ ಇವರ ನೇತೃತ್ವದಲ್ಲಿ ಸ್ವಚ್ಛ ಮಾರ್ಗಂ ಅಭಿಯಾನ ನಡೆಸಲಾಯಿತು. ರಸ್ತೆಯುದ್ದಕ್ಕೂ ಬೆಳೆದಿದ್ದ ಗಿಡಗಂಟಿ, ಹುಲ್ಲು, ತೆಗೆದು ಅದರಿಂದ ಚಾಕೊಲೇಟ್‌ ರ್ಯಾಪರ್‌, ಬಾಟಲಿ, ತಿಂಡಿ ಪೊಟ್ಟಣ ​​ಮುಂತಾದ ಪ್ಲಾಸ್ಟಿಕ್‌ಗಳ ತ್ಯಾಜ್ಯವನ್ನು ಪ್ರತ್ಯೇಕಿಸಲಾಯಿತು. ಚರಂಡಿ ಸ್ವಚ್ಛತೆ ಕೂಡ ಮಾಡಲಾಯಿತು.
ಪಾದಚಾರಿಗಳು ರಸ್ತೆ ಬದಿ ಕಸ ಎಸೆಯುವ ಸಮಸ್ಯೆ ನಿವಾರಣೆಗೆ ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು ರಸ್ತೆಯುದ್ದಕ್ಕೂ ಮಿನಿ ಡಸ್ಟ್‌ಬಿನ್‌ಗಳನ್ನು ಅಳವಡಿಸಿದರು. ಈ ಕಸದ ತೊಟ್ಟಿಗಳನ್ನು ತಂಡದ ಸದಸ್ಯರಾದ ಫೆಲಿಕ್ಸ್ ವಾಝ್ ತಮ್ಮ ಕೈಯ್ಯಾರೆ ತಯಾರಿಸಿದ್ದಾರೆ.
ಪುರಸಭೆಯ ಅಧ್ಯಕ್ಷೆ ಸುಮಾ ಕೇಶವ್ ಮತ್ತು ದಾನಶಾಲೆ ವಾರ್ಡ್ ಪುರುಸಭೆ ಸದಸ್ಯ ಪ್ರದೀಪ್ ಅವರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ನಿವಾಸಿಗಳಿಗೆ ತ್ಯಾಜ್ಯ ವಿಂಗಡಣೆಯ ಅಗತ್ಯದ ಬಗ್ಗೆ ತಿಳಿವಳಿಕೆ ನೀಡಲಾಯಿತು ಮತ್ತು ನಿವಾಸಿಗಳು ತಮ್ಮ ಕುಂದುಕೊರತೆಗಳನ್ನು ಅವರಲ್ಲಿ ತಿಳಿಸಿದರು.
ಕ್ಷೇತ್ರದ ಪ್ರಮುಖರಾದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್, ಡಾ| ಎಂ. ಎಸ್. ಪಡಿವಾಳ್, ಡಾ. ರವಿರಾಜ್ ಶೆಟ್ಟಿ, ಹಿರಿಯ ಅರ್ಚಕ ನಾಗರಾಜ್ ಇಂದ್ರ, ನೇಮಿರಾಜ್ ಆರಿಗ, ಜಗದೀಶ್ ಹೆಗ್ಡೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಅದ್ಭುತ ಕಾರ್ಯವನ್ನು ಶ್ಲಾಘಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!