ಅತ್ಯಾಚಾರ ಆರೋಪದಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡದ ಆಟಗಾರ ಧನುಷ್ಕಾ ಗುಣತಿಲಕ ಬಂಧನ

ಟಿ20 ಆಡಲು ಬಂದ ವೇಳೆ ಆಸ್ಟ್ರೇಲಿಯದಲ್ಲಿ ಅತ್ಯಾಚಾರ ಎಸಗಿದ ಆರೋಪ

ಸಿಡ್ನಿ : ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಟಿ20 ವಿಶ್ವಕಪ್‌ ಆಡಲು ಆಸ್ಟ್ರೇಲಿಯಕ್ಕೆ ಬಂದಿರುವ ಶ್ರೀಲಂಕಾದ ಕ್ರಿಕೆಟ್‌ ಆಟಗಾರ ಧನುಷ್ಕಾ ಗುಣತಿಲಕ ಅವರನ್ನು ಅತ್ಯಾಚಾರ ಆರೋಪದಡಿ ಸಿಡ್ನಿಯಲ್ಲಿ ಬಂಧಿಸಲಾಗಿದೆ. ಐಸಿಸಿ ಟಿ-20 ವಿಶ್ವಕಪ್‌ 2022 ಪಂದ್ಯಾವಳಿಗಾಗಿ ಆಸ್ಟ್ರೇಲಿಯಾಗೆ ಆಗಮಿಸಿರುವ ಧನುಶ್ಕಾ ಗುಣತಿಲಕ ತಾವು ತಂಗಿದ್ದ ಹೋಟೆಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭಿರ ಆರೋಪ ಕೇಳಿಬಂದಿದೆ.
ನ.2ರ ರಾತ್ರಿ ತಾವು ತಂಗಿದ್ದ ಹೋಟೆಲ್‌ನಲ್ಲಿ ಧನುಷ್ಕಾ ಗುಣತಿಲಕ ಅವರು 29 ವರ್ಷದ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಶ್ರೀಲಂಕಾ ಆಟಗಾರ ಧನುಷ್ಕಾ ಗುಣತಿಲಕ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂಗ್ಲೆಂಡ್‌ ವಿರುದ್ಧ ಸೋಲುಂಡು ಐಸಿಸಿ ಟಿ-20 ವಿಶ್ವಕಪ್‌ 2022 ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ತಂಡ, ಈಗಾಗಲೇ ಆಸ್ಟ್ರೇಲಿಯಾವನ್ನು ತೊರೆದಿದೆ. ಆದರೆ ಧನುಷ್ಕಾ ಗುಣತಿಲಕ ಅವರನ್ನು ಸಿಡ್ನಿ ಪೊಲೀಸರು ಅತ್ಯಾಚಾರ ಆರೋಪದಡಿ ಬಂಧಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಎಡಗೈ ಬ್ಯಾಟ್ಸ್‌ಮ್ಯಾನ್‌ ಧನುಷ್ಕಾ ಗುಣತಿಲಕ ಟಿ-20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಶೂನ್ಯ ರನ್‌ ಗಳಿಸಿ ಔಟಾಗಿದ್ದರು. ಬಳಿಕ ತಂಡವು ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಾಗಲೂ, ಅವರು ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಅಂತಿಮವಾಗಿ ಶ್ರೀಲಂಕಾ ತಂಡವು ಗುಂಪು 1ರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ಟೂರ್ನಿಯಿಂದ ಹೊರಬಿದ್ದಿದೆ.
ಅತ್ಯಾಚಾರ ಪ್ರಕರಣದ ಕುರಿತು ಮಾಹಿತಿ ನೀಡಿರುವ ನ್ಯೂ ಸೌತ್ ವೇಲ್ಸ್ ಪೊಲೀಸರು, ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಶ್ರೀಲಂಕಾದ ಪ್ರಜೆಯ ಬಂಧನದ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಎಲ್ಲಿಯೂ ಧನುಷ್ಕಾ ಗುಣತಿಲಕ ಅವರ ಹೆಸರನ್ನು ಉಲ್ಲೇಖಿಸಿಲ್ಲ.
ಕಳೆದ ವಾರ ಸಿಡ್ನಿಯ ಪೂರ್ವದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ತನಿಖೆಯ ನಂತರ, ಲೈಂಗಿಕ ಅಪರಾಧಗಳ ಸ್ಕ್ವಾಡ್ ಶ್ರೀಲಂಕಾದ ಪ್ರಜೆಯನ್ನು ಬಂಧಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ರೋಸ್ ಬೇಯಲ್ಲಿರುವ ನಿವಾಸದಲ್ಲಿ 29 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಇದೀಗ ಧನುಷ್ಕಾ ಗುಣತಿಲಕ ಅವರೇ ಈ ಆರೋಪಿ ಎಂಬುದು ದೃಢಪಟ್ಟಿದೆ.













































error: Content is protected !!
Scroll to Top