Saturday, December 10, 2022
spot_img
Homeಸ್ಥಳೀಯ ಸುದ್ದಿಲಲಿತಾ ನಾಯಕ್‌ ಹೇಳಿಕೆಗೆ ಬಿಜೆಪಿ ಖಂಡನೆ

ಲಲಿತಾ ನಾಯಕ್‌ ಹೇಳಿಕೆಗೆ ಬಿಜೆಪಿ ಖಂಡನೆ

ಕಾಂಗ್ರೆಸಿನ ಹಿಂದು ವಿರೋಧಿ ನೀತಿ ಎಂದ ನವೀನ್‌ ನಾಯಕ್‌

ಕಾರ್ಕಳ: ಕಾಂಗ್ರೆಸ್ ಹಿಂದೂ ವಿರೋಧಿ ಎಂದು ನೂರಾರು ಬಾರಿ ಸಾಬೀತು ಆಗಿದೆ. ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮತ್ತೆ ದೈವಾರಾಧನೆ ಮತ್ತು ದೈವನರ್ತಕರ ವಿರುದ್ಧ ಹೇಳಿಕೆ ಕೊಟ್ಟು ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾರ್ಕಳ ನವೀನ್‌ ನಾಯಕ್‌ ಹೇಳಿದ್ದಾರೆ.
ದೈವಾರಾಧನೆ, ದೈವಗಳು ಹಿಂದೂ ಧರ್ಮದ ನಂಬಿಕೆಗಳ ಭಾಗ ಎಂದು ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ. ಕಾಂತಾರ ಸಿನೆಮಾದಲ್ಲಿ ಕೂಡ ಇದನ್ನು ಒತ್ತಿ ಹೇಳಲಾಗಿದೆ ಮತ್ತು ಆ ಸಿನೆಮಾವನ್ನು ಜಗತ್ತು ಒಪ್ಪಿಕೊಂಡಿದೆ. ದೈವಾರಾಧನೆ ಒಂದು ಧಾರ್ಮಿಕ ನಂಬಿಕೆ. ಕೆಲವು ನಂಬಿಕೆಗಳನ್ನು ವಿವರಿಸಲು ಈವರೆಗೆ ವಿಜ್ಞಾನಿಗಳಿಗೆ ಕೂಡ ಸಾಧ್ಯ ಆಗಿಲ್ಲ. ದೈವಾರಾಧನೆಯಿಂದ ನಂಬಿದವರಿಗೆ ಸಿಗುವ ಸಾಂತ್ವನ, ಗ್ರಾಮದ ಐಕ್ಯತೆ, ಕುಟುಂಬಗಳ ಒಗ್ಗಟ್ಟು ಕಾಪಾಡುವ ದೈವದ ನುಡಿಗಳು, ದೈವಾರಾಧನೆಯಲ್ಲಿ ಇರುವ ಸಂಪ್ರದಾಯ ಮತ್ತು ಕಟ್ಟುಪಾಡುಗಳು ಸಾವಿರಾರು ವರ್ಷಗಳಿಂದಲೂ ಬದಲಾವಣೆ ಆಗದೆ ಮುಂದುವರಿದುಕೊಂಡು ಬಂದಿದೆ. ದೈವಾರಾಧನೆಯ ತಾಣಗಳಲ್ಲಿ ಇಂದಿಗೂ ಮಡಿ, ಮೈಲಿಗೆ ಪಾಲಿಸುತ್ತ ಬಂದಿರುವ ತುಳುನಾಡಿನ ಜನರು ಈ ವೈಜ್ಞಾನಿಕ ಯುಗದಲ್ಲಿ ಕೂಡ ಆ ಪುರಾತನ ಅನುಷ್ಟಾನಗಳನ್ನು ಗೌರವಿಸುತ್ತಾ ಬಂದಿದ್ದಾರೆ ಎಂದಿದ್ದಾರೆ.
ಇತ್ತೀಚೆಗೆ ದೈವದ ಸಾನ್ನಿಧ್ಯವನ್ನು ಅಪವಿತ್ರ ಮಾಡಿದ ಉದ್ಧಟ ಯುವಕರು ಮತ್ತು ಅವರ ಕುಟುಂಬಗಳು ನರಳಿದ ನಿದರ್ಶನಗಳು ನಮ್ಮ ಮುಂದಿವೆ. ಲಲಿತಾ ನಾಯಕರಿಗೆ ಧೈರ್ಯ ಇದ್ದರೆ ಕರಾವಳಿಯ ಯಾವುದೇ ದೈವ ಸನ್ನಿಧಿಗೆ ಬಂದು ಹೇಳಿಕೆಯನ್ನು ಮತ್ತೆ ಉಚ್ಚರಿಸಬೇಕು ಅಥವಾ ದೈವಗಳ ಕ್ಷಮೆ ಕೇಳಬೇಕು.
ದೈವಗಳ ಆವೇಶವನ್ನು ವಿಜ್ಞಾನಿಗಳು ಕೂಡ ಪ್ರಶ್ನೆ ಮಾಡುವುದಿಲ್ಲ. ದೈವದ ಮೇಲಿನ ಅತಿಯಾದ ಭಯ ಭಕ್ತಿ ಮತ್ತು ನಂಬಿಕೆಗಳು ಸೇರಿ ದೈವ ನರ್ತಕರು ಪಡೆಯುವ ಆವೇಶ ಕೂಡ ವೈಜ್ಞಾನಿಕ ಆಧಾರವನ್ನು ಪಡೆದಿದೆ. ಅದನ್ನು ಸುಳ್ಳು ಎಂದು ಹೇಳುವ ಮೂಲಕ ಲಲಿತಾ ನಾಯಕರು ಹಿಂದೂ ಧರ್ಮದ ನಂಬಿಕೆಗಳನ್ನು ಟೀಕೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ. ಇಸ್ಲಾಮಿಕ್ ನಂಬಿಕೆಗಳನ್ನು ಸಮರ್ಥನೆ ಮಾಡುವ ಕಾಂಗ್ರೆಸ್ ನಾಯಕರ ನಡೆಯನ್ನು ಬಿಜೆಪಿ ಖಂಡಿಸುತ್ತದೆ ಎಂದಿದ್ದಾರೆ.
ದಶಕಗಳಿಂದ ಕಾಂಗ್ರೆಸ್ ಇಷ್ಟು ವರ್ಷ ಮಾಡಿದ್ದು ಅದನ್ನೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆ, ಮಸೀದಿ, ಮದರಸಗಳಿಗೆ ದುಡ್ಡು ಸುರಿದದ್ದು ಜನರ ಕಣ್ಣ ಮುಂದೆ ಇದೆ.
ಬಿಜೆಪಿ ಸರಕಾರದ ಆಡಳಿತದಲ್ಲಿ ಸಚಿವ ವಿ. ಸುನೀಲ್‌ ಕುಮಾರ್ ಅವರ ಶಿಫಾರಸ್ಸಿನ ಮೇರೆಗೆ ಈ ವರ್ಷ ಮೊದಲ ಬಾರಿಗೆ ದೈವ ನರ್ತಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಅದೇ ರೀತಿಯಲ್ಲಿ ದೈವ ನರ್ತಕರಿಗೆ ಮಾಸಾಶನವನ್ನು ನೀಡುವ ಆದೇಶ ಹೊರಡಿಸಿದ್ದು ಕೂಡ ಐತಿಹಾಸಿಕ ತೀರ್ಮಾನ ಆಗಿದೆ.
ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೊರಟಿರುವ ಕಾಂಗ್ರೆಸ್, ಬಿಜೆಪಿ ಸರಕಾರದ ಜನಪರ ಆಡಳಿತದಿಂದ ಹತಾಶೆಗೊಂಗಿದೆ ಎಂದು ಜನ ಸಾಮಾನ್ಯರಿಗೂ ಅರ್ಥ ಆಗುತ್ತದೆ. ಮುಂದಿನ ಚುನಾವಣೆಯಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್‌ಗೆ ಜನರೇ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!