ಗಲ್ಲು ಶಿಕ್ಷೆಯನ್ನು ಜೀವಾವಧಿಗಿಳಿಸಿದ ಸುಪ್ರೀಂ ಕೋರ್ಟ್
ಬೆಂಗಳೂರು: ಸರಣಿ ಕೊಲೆ ಆರೋಪಿ, ವಿಕೃತ ಕಾಮಿ ಬಿ.ಎ. ಉಮೇಶ್ ಅಲಿಯಾಸ್ ಉಮೇಶ್ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ ವಿಧಿಸಿ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ಶಿಕ್ಷೆಯನ್ನು ಜೀವಾವಧಿಗಿಳಿಸಿದೆ. ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಉಮೇಶ್ ರೆಡ್ಡಿ ಸುಪ್ರೀಂ ಮೆಟ್ಟಿಲೇರಿದ್ದನು. ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ಗಲ್ಲು ಶಿಕ್ಷೆ ವಿಳಂಬವಾಗಿರುವ ಕಾರಣ ಜೀವಾವಧಿಗಿಳಿಸಿದೆ.
ಉಮೇಶ್ ರೆಡ್ಡಿಯನ್ನು ಬೆಳಗಾವಿ ಜೈಲಿನಲ್ಲಿ 10 ವರ್ಷಗಳ ಕಾಲ ಏಕಾಂಗಿಯಾಗಿ ಇರಿಸಲಾಗಿತ್ತು. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದು ಆತನ ಮಾನಸಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ತೀರ್ಪಿನ ಪ್ರಕಾರ ರೆಡ್ಡಿ ಒಟ್ಟು 30 ವರ್ಷ ಜೈಲು ವಾಸ ಅನುಭವಿಸಿದರೆ ಸಾಕಾಗುತ್ತದೆ.
ಉಮೇಶ್ ರೆಡ್ಡಿಗೆ 2006ರಲ್ಲಿ ವಿಚಾರಣಾ ನ್ಯಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. 2011ರಲ್ಲಿ ಸುಪ್ರೀಂ ಕೋರ್ಟ್ ಈ ಶಿಕ್ಷೆಯನ್ನು ಕಾಯಂಗೊಳಿಸಿತ್ತು. 2013ರಲ್ಲಿ ರಾಷ್ಟ್ರಪತಿ ಅವನ ಕ್ಷಮಾಭಿಕ್ಷೆಯ ಅರ್ಜಿಯನ್ನು ವಜಾ ಮಾಡಿದ್ದರು. 2006ರಿಂದ 2016ವರೆಗೆ ತನ್ನನ್ನು ಬೆಳಗಾವಿಯ ಜೈಲಿನಲ್ಲಿ ಕತ್ತಲ ಕೋಣೆಯಲ್ಲಿ ಇರಿಸಲಾಗಿತ್ತು ಎಂದು ರೆಡ್ಡಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ತಿಳಿಸಿದ್ದ. ಇದನ್ನು ನ್ಯಾಯಾಲಯ ಪರಿಗಣಿಸಿದೆ.
ಚಿತ್ರದುರ್ಗದ ಉಮೇಶ್ ರೆಡ್ಡಿ ಸಿಆರ್‌ಪಿಎಫ್‌ಗೆ ಆಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದ. ನಂತರ ಪೊಲೀಸ್ ಇಲಾಖೆಗೆ ಸೇರಿದ್ದ ಆತನ ವಿರುದ್ಧ ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು 9 ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.
1998ರ ಫೆಬ್ರವರಿ 28ರಂದು ಜಯಶ್ರೀ ಎಂಬ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ 2007ರಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಇದಾದ ಬಳಿಕ ಉಮೇಶ್ ರೆಡ್ಡಿಯ ತಾಯಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದು ಅದು 2013ರಲ್ಲಿ ತಿರಸ್ಕರಿಸಲಾಗಿತ್ತು.