ಸುಳ್ಯದ 2ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

ರಾಜ್ಯದಲ್ಲಿ ಮೂರನೇ ಪ್ರಕರಣ- ಕಳವಳ ಮೂಡಿಸಿದ ಮಕ್ಕಳ ಮೃತ್ಯು

ಮಂಗಳೂರು: ಸುಳ್ಯ ತಾಲೂಕಿನ ಕುಂಟಿನಾಕ ಗ್ರಾಮದ 2ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೋಕ್ಷಿತ್ (7) ಮೃತಪಟ್ಟಿರುವ ಬಾಲಕ. ಈತ ಕುಕ್ಕುಜಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ.
ಶಾಲೆಗೆ ಬಂದಿದ್ದ ಬಾಲಕನಿಗೆ ಹಣೆ ಬಿಸಿಯಾಗಿತ್ತು. ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಶಿಕ್ಷಕರು ಪೋಷಕರನ್ನು ಶಾಲೆಗೆ ಕರೆಸಿದರು. ತಂದೆ ಎದುರೇ ಮೋಕ್ಷಿತ್ ಕುಸಿದುಬಿದ್ದ. ತಕ್ಷಣ ಮಗನನ್ನು ಎತ್ತಿಕೊಂಡು ಅವರು ಸುಳ್ಯ ಪಟ್ಟಣದ ಖಾಸಗಿ ಆಸ್ಪತ್ರೆಗೆ ತೆರಳಿದರು. ಮಗುವಿನ ದೇಹ ಲಕ್ಷಣ ಪರಿಶೀಲಿಸಿದ ವೈದ್ಯರು ಬಾಲಕನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದರು.
ಮಕ್ಕಳಲ್ಲಿ ಇತ್ತೀಚೆಗೆ ಹೃದಯಘಾತ ಹೆಚ್ಚಾಗುತ್ತಿರುವುದು ಕಳವಳ ಉಂಟು ಮಾಡಿದೆ. ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಹೃದಯಾಘಾತದಿಂದ 9ನೇ ತರಗತಿಯ ಬಾಲಕಿ ವೈಷ್ಣವಿ (14) ಮೃತಪಟ್ಟಿದ್ದಳು. ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ 13 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಳು. 8ನೇ ತರಗತಿಯಲ್ಲಿ ಓದುತ್ತಿದ್ದ ಅನುಶ್ರೀ, ಮನೆಯಲ್ಲಿ ಓದುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಳು, ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಇಹಲೋಕ ತ್ಯಜಿಸಿದ್ದಳು.
ದೇಹದಲ್ಲಿ ರಕ್ತ ಪೂರೈಕೆಗೆ ಅಡಚಣೆ ಉಂಟಾದಾಗ, ಹೃದಯದ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಇದರಿಂದ ಹೃದಯಾಘಾತದಂತಹ ಗಂಭೀರ ಸಮಸ್ಯೆ ಉಂಟಾಗುತ್ತದೆ. ಕೊರೊನಾ ಸಮಯದಲ್ಲಿ ಪ್ರಪಂಚಾದ್ಯಂತ ಶಾಲೆಗಳನ್ನು ಮುಚ್ಚಲಾಗಿತ್ತು, ಮಕ್ಕಳು ಆಟವಾಡುವುದನ್ನೂ ನಿಲ್ಲಿಸಿದ್ದರು, ಮನೆಯಲ್ಲಿ ಟಿವಿ, ಮೊಬೈಲ್, ಲ್ಯಾಪ್​ಟಾಪ್ ಮುಂದೆ ಕೂತು ಕುರುಕು ತಿಂಡಿಗಳನ್ನು ತಿನ್ನುತ್ತಿದ್ದರು. ಒಂದೇ ಜಾಗದಲ್ಲಿ ದಿನಪೂರ್ತಿ ಕುಳಿತಿದ್ದರೆ ಹೃದ್ರೋಗದ ಅಪಾಯ ಹೆಚ್ಚು. ಈಗಿನ ಮಕ್ಕಳ ಮೊಬೈಲ್ ಫೋನಿನ ಚಟ ದೇಹ ಮತ್ತು ಮನಸ್ಸನ್ನು ದುರ್ಬಲಗೊಳಿಸುತ್ತಿದೆ.

Latest Articles

error: Content is protected !!