ಶಾಲೆಗಳಲ್ಲಿ ಧ್ಯಾನ ಮಾಡಿಸುವುದಕ್ಕೆ ಸಾಹಿತಿಗಳಿಂದ ವಿರೋಧ

ವಿಪಕ್ಷ ನಾಯಕ ಸಿದ್ದರಾಮಯ್ಯನವರಿಂದಲೂ ಆಕ್ಷೇಪ

ಬೆಂಗಳೂರು: ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಧ್ಯಾನ ಮಾಡಿಸಬೇಕೆಂಬ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಪ್ರಸ್ತಾವಕ್ಕೆ ಕೆಲವು ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು ಆಕ್ಷೇಪ ಎತ್ತಿದ್ದಾರೆ.
ಎಲ್ಲ ಮಕ್ಕಳಿಗೆ ಸಮಾನತೆಯ ನೆಲೆಯಲ್ಲಿ ಗುಣಾತ್ಮಕ ಶಿಕ್ಷಣ ಒದಗಿಸಬೇಕೆಂದು ಸಂವಿಧಾನ ಮತ್ತು ಶಿಕ್ಷಣ ಹಕ್ಕು ಕಾಯಿದೆ ಹೇಳುತ್ತದೆ. ಆದರೆ ಶಿಕ್ಷಣ ಸಚಿವರು ದಿನಕ್ಕೊಂದು ಹೊಸ ಆದೇಶಗಳನ್ನು ಜಾರಿಗೊಳಿಸಿ, ವಿವಾದಗಳನ್ನು ಹುಟ್ಟುಹಾಕಿ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಲು ಪಣತೊಟ್ಟಿರುವಂತೆ ವರ್ತಿಸುತ್ತಿದ್ದಾರೆ ಎಂದು ವಿ.ಪಿ. ನಿರಂಜನಾರಾಧ್ಯ, ಎಸ್‌.ಜಿ.ಸಿದ್ದರಾಮಯ್ಯ, ವಿಜಯಮ್ಮ, ಕಾಳೇಗೌಡ ನಾಗವಾರ, ಹೊ.ಶಿ.ರಾಮಚಂದ್ರೇ ಗೌಡ, ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಪಿ.ವಿ.ಭಂಡಾರಿ, ಡಾ.ಯೋಗಾನಂದ ರೆಡ್ಡಿ ಮತ್ತಿತರರು ಹೇಳಿದ್ದಾರೆ.
ಇಲಾಖೆ ಸೂಚಿಸದೆ ಇರುವ ಧ್ಯಾನ ಇತ್ಯಾದಿಗಳನ್ನು ನಡೆಸಲು ಶಿಕ್ಷಕರ ಸಂಘಕ್ಕೆ ಅಧಿಕಾರ ಇಲ್ಲ. ಹೀಗೆ ಮಾಡಿದರೆ ಕಾನೂನು ಬಾಹಿರವಾಗುತ್ತದೆ. ಆದರೆ ಅದನ್ನು ಸಮರ್ಥಿಸಿ ಎಲ್ಲ ಶಾಲೆಗಳಲ್ಲಿ ನಡೆಸಲು ಹೇಳುತ್ತಿರುವುದು ಆಘಾತಕಾರಿ. ಶಿಕ್ಷಣ ಸಚಿವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಸರಸ್ವತಿ ಶಿಶುಮಂದಿರ ಮಾಡಲು ಸಚಿವರು ಹೊರಟಂತಿದೆ ಎಂದು ಸಾಹಿತಿಗಳು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ವಿರೋಧ
ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯನವರೂ ಸರಕಾರದ ನಡೆಯನ್ನು ವಿರೋಧಿಸಿದ್ದಾರೆ. ಕೋವಿಡ್‌ ಅನ್ನು ಸರಿಯಾಗಿ ನಿಭಾಯಿಸದೆ ಆನ್‌ಲೈನ್‌ ತರಗತಿಗಳನ್ನು ಮಾಡಿ ಮಕ್ಕಳಿಗೆ ಮೊಬೈಲ್‌ ಹುಚ್ಚು ಹಿಡಿಸಿದ ಸರ್ಕಾರ ಇಗ ಅದನ್ನು ಬಿಡಿಸಲು ಧ್ಯಾನದ ಮೊರೆ ಹೋಗಿದೆ ಎಂದವರು ಲೇವಡಿ ಮಾಡಿದ್ದಾರೆ.
ಎಳೆಯ ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕಿ ಬಲವಂತವಾಗಿ ಯೋಗ, ಧ್ಯಾನದ ಕಸರತ್ತು ಮಾಡಿಸಿದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಮೊದಲು ಸಾಕಷ್ಟು ಶಿಕ್ಷಕರನ್ನು ನೇಮಿಸಿ ಬೋಧನಾ ಸಲಕರಣೆಗಳನ್ನು ಒದಗಿಸಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ. ಶಾಲೆಗಳಿಗೆ ಕಲೆ, ಸಂಗೀತ ಮತ್ತು ಕ್ರೀಡೆ ತರಬೇತಿ ನೀಡುವ ಶಿಕ್ಷಕರನ್ನು ನೇಮಿಸಬೇಕು. ಅದನ್ನು ಬಿಟ್ಟು ರಾಜಕೀಯ ಅಜೆಂಡಾ ಇಟ್ಟುಕೊಂಡು ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು ಎಂದು ಹೇಳಿದ್ದಾರೆ.
ಮಕ್ಕಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಶಾಲೆ ಮತ್ತು ಕಾಲೇಜುಗಳಲ್ಲಿ ಧ್ಯಾನ ಮಾಡಿಸುವುದು ಅಗತ್ಯ. ಈಗಾಗಲೇ ಕೆಲವು ಶಾಲೆಗಳಲ್ಲಿ ಧ್ಯನಾ ಮಾಡಿಸಲಾಗುತ್ತದೆ. ಅದನ್ನು ಎಲ್ಲ ಶಾಲೆಗಳಿಗೆ ವಿಸ್ತರಿಸಬೇಕೆಂದು ಬಿ.ಸಿ.ನಾಗೇಶ್‌ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದರು.





























































































































































































































error: Content is protected !!
Scroll to Top