ಪ್ರಕರಣಕ್ಕೆ ಹೊಸ ತೀರುವು ನೀಡಿದ ರೇಣುಕಾಚಾರ್ಯ ಹೇಳಿಕೆ
ದಾವಣಗೆರೆ: ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ನಿಗೂಢ ಸಾವಿನ ಪ್ರಕರಣ ಮತೀಯ ಹಿಂಸಾಚಾರದಿಂದ ನಡೆದ ಕೊಲೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ರೇಣುಕಾಚಾರ್ಯ ಅವರು ನೀಡಿದ ಹೇಳಿಕೆಯೊಂದು ಈ ಅನುಮಾನವನ್ನು ಹುಟ್ಟುಹಾಕಿದೆ.
ಚಂದ್ರಶೇಖರ್ ಹಿಂದುತ್ವಕ್ಕಾಗಿ ಹೋರಾಡುತ್ತಿದ್ದ, ಶಿವಮೊಗ್ಗದ ಸಾವರ್ಕರ್ ಫ್ಲೆಕ್ಸ್ ವಿವಾದದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಫ್ಲೆಕ್ಸ್ ಗಲಾಟೆ ಆದಾಗಲೇ ನಾವು ಎಚ್ಚರಿಕೆ ವಹಿಸುತ್ತಿದ್ದರೆ ಈ ದುರಂತವನ್ನು ತಡೆಯಬಹುದಿತ್ತು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಅವರ ಈ ಹೇಳಿಕೆ ಪರೋಕ್ಷವಾಗಿ ಚಂದ್ರಶೇಖರ್ ಸಾವಿನ ಹಿಂದೆ ಮತೀಯವಾದದ ಕೈ ಇದೆಯೆಂಬ ಅನುಮಾನ ಹುಟ್ಟಿಸುತ್ತಿದೆ. ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ ಚಂದ್ರಶೇಖರ್ ಸಾವು ಆತ್ಮಹತ್ಯೆ ಅಲ್ಲ ಎಂಬ ಭಾವನೆ ದಟ್ಟವಾಗಿ ಹರಡಿದೆ. ಅವರಿದ್ದ ಕಾರು ಅಪಘಾತವಾಗಿ ನಾಲೆಗೆ ಬಿದ್ದಿಲ್ಲ ತಲೆಗೆ ಮಚ್ಚಿನಿಂದ ಹೊಡೆದು ಕೊಂದು ಹಿಂದಿನ ಸೀಟಿಗೆ ಹಾಕಿ ಕಾರನ್ನು ನಾಲೆಗೆ ತಳ್ಳಲಾಗಿದೆ ಎಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ಕಾರು ವಿಪರೀತ ವೇಗದಲ್ಲಿ ಹೋಗಿ ಗುದ್ದಿದ್ದರೆ ಪಲ್ಟಿಯಾಗಬೇಕಿತ್ತು ಕಾರಿನ ಎರಡೂ ಏರ್ ಬ್ಯಾಗ್ ಓಪನ್ ಆಗಿತ್ತು, ಚಂದ್ರಶೇಖರ್ ದೇಹ ಕಾರಿನ ಹಿಂದಿನ ಸೀಟಲ್ಲಿ ಇದ್ದದ್ದು ಎಲ್ಲಾ ಶಂಕೆಗಳಿಗೆ ಕಾರಣವಾಗುತ್ತಿದೆ. ಅಪಘಾತವೇ ಸಂಭವಿಸಿದ್ದರೆ ಮುಂದಿನ ಸೀಟಿನಲ್ಲಿದ್ದವರು ಎಲ್ಲಿ ಹೋಗಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಾರು ನ್ಯಾಮತಿ ಪಾಸ್ ಆಗುವಾಗ ಮುಂಭಾಗದಲ್ಲಿ ಇಬ್ಬರು ಇದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಈ ಇಬ್ಬರು ಸೀಟ್ ಬೆಲ್ಟ್ ಹಾಕಿಕೊಂಡು ಕಾರನ್ನು ಅಪಘಾತಕ್ಕೆ ಒಳಪಡಿಸಿ ಏರ್ ಬ್ಯಾಗ್ ಓಪನ್ ಆದ ಮೇಲೆ ಟಾಪ್ ಗೇರ್‌ಗೆ ಹಾಕಿ ನಾಲೆಗೆ ನೂಕಿರಬಹುದು ಎಂಬ ಶಂಕೆ ಇದೆ.