ಇಡೀ ದೇಶದ ಕುತೂಹಲ ಕೆರಳಿಸಿರುವ ಮೋದಿಯ ತವರು ರಾಜ್ಯ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾಗಿರುವ ಗುಜರಾತ್ನ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಪ್ರಕಟಿಸಲಿದೆ.
ಗುಜರಾತ್ನಲ್ಲಿ ಗೆಲ್ಲುವುದು ಬಿಜೆಪಿಗೆ ಆತ್ಮವಿಶ್ವಾಸ ವೃದ್ಧಿಯ ದೃಷ್ಟಿಯಿಂದ ಮಹತ್ವದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಪ್ರಯತ್ನಗಳ ಮೇಲೆಯೂ ಗುಜರಾತ್ ಚುನಾವಣೆಯು ಪ್ರಭಾವ ಬೀರಲಿದೆ.
ಬಿಜೆಪಿ ಈಗಾಗಲೇ ಗುಜರಾತ್ನಲ್ಲಿ ಚುನಾವಣೆ ಸಿದ್ಧತೆ ಆರಂಭಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಜನ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಳೆದ ಬಾರಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಯಾಸದ ಗೆಲುವು ಸಾಧಿಸಿತ್ತು. ಹೀಗಾಗಿ ಪಕ್ಷ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತದೆ.
ಆಮ್ ಆದ್ಮಿ ಪಕ್ಷವು (ಆಪ್) ಕೂಡ ಈ ಸಲ ಗುಜರಾತ್ನಲ್ಲಿ ತನ್ನ ಹೆಜ್ಜೆಯೂರಲು ಪ್ರಯತ್ನಸುತ್ತಿದೆ. ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಹಲವು ಬಾರಿ ಗುಜರಾತ್ಗೆ ಭೇಟಿ ನೀಡಿ ಸಂಘಟನೆ ಚುರುಕುಗೊಳಿಸಲು ಯತ್ನಿಸಿದ್ದಾರೆ. ಗುಜರಾತ್ನಲ್ಲಿ ಆಪ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ ತುಸು ಮಂಕಾಗಿರುವಂತೆ ಕಂಡುಬರುತ್ತಿದೆ. ಭಾರತ್ ಜೋಡೋ ಯಾತ್ರೆ, ಎಐಸಿಸಿ ಅಧ್ಯಕ್ಷರ ಚುನಾವಣೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಮುಳುಗಿರುವ ಪಕ್ಷದ ನಾಯಕರು ಇನ್ನಷ್ಟೇ ಗುಜರಾತ್ನತ್ತ ಗಮನ ಹರಿಸಬೇಕಿದೆ.