ಇಂದು ಅಡಿಲೇಡ್‌ನಲ್ಲಿ ಭಾರತ- ಬಾಂಗ್ಲಾ ಮುಖಾಮುಖಿ

ಗೆದ್ದರೆ ಸೆಮಿಫೈನಲ್‌ ಪ್ರವೇಶ ಸರಾಗ

ಅಡಿಲೇಟ್‌ : ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಬುಧವಾರ ಅಡಿಲೇಡ್‌ನ ಓವಲ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಸೆಮಿಫೈನಲ್‌ಗೇರಲು ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಆದರೆ ಈ ಪಂದ್ಯಕ್ಕೆ ಮಳೆಕಾಟ ಎದುರಾಗುವ ಸಾಧ್ಯತೆಯಿದೆ. ಈ ಪಂದ್ಯ ಮಧ್ಯಾಹ್ನ 1.30ಕ್ಕೆ ಶುರುವಾಗಲಿದ್ದು, ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ಈ ವಿಶ್ವಕಪ್‌ನಲ್ಲಿ ಮಳೆಯಿಂದಾಗಿ ಕೆಲವು ಪಂದ್ಯಗಳು ರದ್ದಾಗಿವೆ. ಇದರಿಂದಾಗಿ ಸೆಮಿಫೈನಲ್‌ಗೆ ಹೋಗುವ ತಂಡಗಳು ಯಾವುವು ಎಂಬುದಕ್ಕೆ ಇನ್ನೂ ಸ್ಪಷ್ಟವಾಗಿಲ್ಲ. ಮಂಗಳವಾರ ಮಳೆಯಿಂದಾಗಿ ಟೀಂ ಇಂಡಿಯಾ ಒಳಾಂಗಣ ಅಭ್ಯಾಸ ನಡೆಸಬೇಕಾಯಿತು. ಈಗ ಇಂತಹ ಪರಿಸ್ಥಿತಿಯಲ್ಲಿ ಬುಧವಾರದ ವಾತಾವರಣ ಹೇಗಿರಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಒಂದು ವೇಳೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಈ ಪಂದ್ಯ ಮಳೆಯಿಂದಾಗಿ ನಡೆಯದಿದ್ದರೆ ಸೆಮಿಫೈನಲ್‌ಗೆ ಹೋಗುವ ಉಭಯ ತಂಡಗಳ ಆಸೆಗೆ ಹಿನ್ನಡೆಯಾಗಬಹುದು. ಅಂಕಪಟ್ಟಿಯಲ್ಲಿ ಉಭಯ ತಂಡಗಳ ಸ್ಥಾನವನ್ನು ಗಮನಿಸಿದರೆ, ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಭಾರತ ತಂಡ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಕೂಡ ನಾಲ್ಕು ಅಂಕಗಳನ್ನು ಹೊಂದಿದೆ. ಆದರೆ ಅದು ನೆಟ್ ರನ್‌ ರೇಟ್‌ನಲ್ಲಿ ಭಾರತಕ್ಕಿಂತ ಹಿಂದಿರುವುದರಿಂದ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯ ಮಳೆಯಿಂದ ನಡೆಯಲು ಸಾಧ್ಯವಾಗದೇ ಇದ್ದರೆ ಎರಡೂ ತಂಡಗಳು ತಮ್ಮ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿವೆ. ಅಲ್ಲದೆ ನೆಟ್ ರನ್ ರೇಟ್ ಕೂಡ ಸೆಮಿಫೈನಲ್‌ಗೆ ಹೋಗುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

Latest Articles

error: Content is protected !!