ಬೆಂಗಳೂರು : ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ನೂತನ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಬ್ಯಾಕ್ ಟು ಬ್ಯಾಕ್ ಫಿಫ್ಟಿ ಬಾರಿಸಿದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್, ಇದೀಗ ಟಿ20 ಶ್ರೇಯಾಂಕದಲ್ಲೂ ಅಗ್ರಸ್ಥಾನ ಅಲಂಕರಿಸಿದ್ದಾರೆ.
32 ವರ್ಷದ ಅನುಭವಿ ಬಲಗೈ ಬ್ಯಾಟರ್ ಮೊದಲಿಗೆ ನೆದರ್ಲೆಂಡ್ಸ್ ಎದುರು 25 ಎಸೆತಗಳಲ್ಲಿ 51 ರನ್ ಸಿಡಿಸಿದ್ದರು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿ 40 ಎಸೆತಗಳಲ್ಲಿ 68 ರನ್ ಬಾರಿಸಿದ್ದರು. ಈ ಇನಿಂಗ್ಸ್‌ಗಳೊಂದಿಗೆ ಅವರು ಐಸಿಸಿ ಟಿ20-ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿನ ತಮ್ಮ ರೇಟಿಂಗ್ಸ್ ಅಂಕಗಳನ್ನು 863ಕ್ಕೆ ವಿಸ್ತರಿಸಿಕೊಂಡಿದ್ದಾರೆ.
ಇದರೊಂದಿಗೆ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಝ್ವಾನ್ ಅವರನ್ನು ಹಿಂದಿಕ್ಕಿ ವಿಶ್ವದ ನಂ.1 ಟಿ20-ಐ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಿಝ್ವಾನ್ ಅವರಿಗಿಂತಲೂ ಸೂರ್ಯಕುಮಾರ್ ಯಾದವ್ ಒಟ್ಟು 21 ಅಂಕಗಳ ಮುನ್ನಡೆ ಗಳಿಸಿಕೊಂಡಿದ್ದಾರೆ.
2021ರಲ್ಲಿ ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಈವರೆಗೆ ಒಟ್ಟು 37 ಪಂದ್ಯಗಳನ್ನು ಆಡಿದ್ದು, ಒಂದು ಶತಕ ಒಳಗೊಂಡಂತೆ 1179 ರನ್‌ಗಳನ್ನು ಬಾರಿಸಿದ್ದಾರೆ. ಕಳೆದ ಜುಲೈನಲ್ಲಿ ಅವರು ಇಂಗ್ಲೆಂಡ್ ಎದುರು ಶತಕ ಬಾರಿಸಿದ್ದರು.
ಟಿ20 ಕ್ರಿಕೆಟ್‌ಗೆ ಸೂರ್ಯಕುಮಾರ್ ಯಾದವ್ ನಂ.1 ಬ್ಯಾಟ್ಸ್‌ಮನ್
