ಬ್ರ್ಯಾಂಡ್ ಬೆಂಗಳೂರಿಗೆ ಪ್ರಧಾನಿ ಮೋದಿ ಶ್ಲಾಘನೆ
ಬೆಂಗಳೂರು: ಕರ್ನಾಟಕ ಅಪಾರ ಪ್ರಾಕೃತಿಕ ಸಂಪತ್ತು, ಆರ್ಥಿಕ, ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಕರ್ನಾಟಕ ಇಡೀ ಜಗತ್ತನೇ ಸೆಳೆದಿದೆ. ಕರ್ನಾಟಕದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದೆ. ಇದು ಸಂಪ್ರದಾಯ ಮತ್ತು ತಂತ್ರಜ್ಞಾನ ಎರಡೂ ಇರುವ ಸ್ಥಳ. ನಾವು ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ, ಮೊದಲು ನೆನಪಿಗೆ ಬರುವುದು ಬ್ರ್ಯಾಂಡ್ ಬೆಂಗಳೂರು ಎಂದು ಕರ್ನಾಟಕದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಶ್ಲಾಘಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಮಾತನಾಡಿದರು.
ಬ್ರ್ಯಾಂಡ್ ಬೆಂಗಳೂರು ಜಗತ್ ಪ್ರಸಿದ್ಧವಾಗಿದೆ. ಕರ್ನಾಟಕ ಸಂಸ್ಕೃತಿ ಜೊತೆ ತಂತ್ರಜ್ಞಾನವೂ ಇದೆ. ಭಾರತದ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಇಲ್ಲಿ ಹೂಡಿಕೆ ಮಾಡುವುದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರಕುವುದಲ್ಲದೆ ರಾಜ್ಯದ, ದೇಶದ ಅರ್ಥ ವ್ಯವಸ್ಥೆ ಅಭಿವೃದ್ಧಿಯಾಗುತ್ತದೆ. ಇದು ಜಾಗತಿಕ ಬಿಕ್ಕಟ್ಟಿನ ಸಮಯವಾಗಿದ್ದರೂ, ಪ್ರಪಂಚದಾದ್ಯಂತದ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಭಾರತವನ್ನು ಭರವಸೆಯ ತಾಣವೆಂದು ಬಣ್ಣಿಸುತ್ತಿದ್ದಾರೆ ಎಂದರು.
ಇಂದು ಭಾರತದ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಕೋವಿಡ್ ಸಂಕಷ್ಟದಿಂದ ಇಡೀ ವಿಶ್ವವೇ ನಲುಗಿ ಹೋಗಿತ್ತು. ಅದನ್ನು ಭಾರತ ಸಮರ್ಥವಾಗಿ ಎದುರಿಸಿ ಇಂದು ಆರ್ಥಿಕತೆ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಭಾರತ ದೇಶದ ಅಪಾರ ಮಾನವ ಮತ್ತು ಪ್ರಕೃತಿ ಸಂಪನ್ಮೂಲ, ಇಲ್ಲಿನ ಸಂಸ್ಕೃತಿ, ತಂತ್ರಜ್ಞಾನ, ವಿಜ್ಞಾನವೇ ಕಾರಣ ಎಂದು ಹೇಳಿದ್ದಾರೆ.
ಭಾರತದ ಅರ್ಥವ್ಯವಸ್ಥೆ ದಿನೇದಿನೇ ಸುಧಾರಣೆಯಾಗುತ್ತಿದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿದೆ. ಹೂಡಿಕೆದಾರರನ್ನು ಕ್ಲಿಷ್ಟ ನಿಯಮಗಳಿಂದ ಮುಕ್ತಗೊಳಿಸಿದ್ದೇವೆ. ಅವರಿಗೆ ಅವಕಾಶಗಳ ಮಹಾಪೂರವನ್ನೇ ನೀಡಿದ್ದೇವೆ. ರಕ್ಷಣೆ, ಡ್ರೋನ್, ಬಾಹ್ಯಾಕಾಶ ಮತ್ತು ಜಿಯೋಸ್ಪೇಷಿಯಲ್ ಮ್ಯಾಪಿಂಗ್ನಂತಹ ಖಾಸಗಿ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಿದ್ದೇವೆ ಎಂದರು.