ನಿಟ್ಟೆ: ದಿವ್ಯಾಂಕುರ-ಕನ್ನಡ ರಾಜ್ಯೋತ್ಸವ ಸಮಾರಂಭ

ಜಾನಪದ ಕಲಾ ಪ್ರಕಾರಗಳು ಕನ್ನಡದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ- ವಿದುಷಿ ಮಾನಸಿ ಸುಧೀರ್

ಕಾರ್ಕಳ: ಜಾನಪದ ಕಲಾ ಪ್ರಕಾರಗಳು ಈ ಮಣ್ಣಿನ ಸಂಸ್ಕೃತಿ ಮತ್ತು ಸೊಬಗನ್ನು ಪ್ರತಿನಿಧಿಸುತ್ತದೆ. ಮುಂದಿನ ಪೀಳಿಗೆಗೆ ಈ ಕಲಾ ಪ್ರಕಾರಗಳನ್ನು ತಿಳಿಸುವ ಜವಬ್ದಾರಿ ಇಂದಿನ ಜನತೆಯದ್ದಾಗಿದೆ ಎಂದು ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ.1ರಂದು ನಡೆದ ‘ದಿವ್ಯಾಂಕುರ’ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಂಸ್ಕೃತಿಕ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ, ಸಂಸ್ಕೃತಿ ಇಲ್ಲಿನ ಕಲಾವಿದರು, ವಿವಿಧ ಬಗೆಯ ಕಲಾಪ್ರಕಾರಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿರುವುದು ಹೆಮ್ಮೆಯ ವಿಚಾರ. ಸಾಮಾಜಿಕ ಜಾಲತಾಣಗಳು, ಚಲನಚಿತ್ರಗಳ ಮೂಲಕ ಯುವಜನತೆಯಲ್ಲಿ ಕನ್ನಡಾಭಿಮಾನವನ್ನು ಬೆಳೆಸುತ್ತಿರುವುದು ಉತ್ತಮ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಮಾತನಾಡಿ, ವ್ಯಾವಹಾರಿಕ ದೃಷ್ಠಿಯಿಂದ ವಿವಿಧ ಭಾಷೆಗಳನ್ನು ಕಲಿಯುವುದು ಅಗತ್ಯವಾದರೂ ಕನ್ನಡವನ್ನು ನಾವು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳಲ್ಲಿ ಕನ್ನಡ ಸಂಭ್ರಮಾಚರಣೆಯಂತಹ ಕಾರ್ಯಕ್ರಮಗಳ ಆಯೋಜನೆಯಲ್ಲಿ ಇರುವ ಆಸಕ್ತಿ ಶ್ಲಾಘನೀಯ ಎಂದರು. ಉಪ ಪ್ರಾಂಶುಪಾಲ ಡಾ. ಐ. ಆರ್. ಮಿತ್ತಂತಾಯ, ಡಾ .ಶ್ರೀನಿವಾಸ ರಾವ್ ಬಿ ಆರ್, ಕ್ಯಾಂಪಸ್ ಮೈಂಟೆನೆನ್ಸ್ ಮತ್ತು ಡೆವಲೆಪ್ಮೆಂಟ್ ವಿಭಾಗದ ನಿರ್ದೇಶಕ ಪ್ರೊ. ಯೋಗೀಶ್ ಹೆಗ್ಡೆ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ‌. ನರಸಿಂಹ ಬೈಲ್ಕೇರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂರ್ವಿಕಾ ಸ್ವಾಗತಿಸಿ, ಸಿಂಚನಾ ಎಸ್ ಬಯರಿ ಅತಿಥಿಗಳನ್ನು ಪರಿಚಯಿಸಿದರು. ನಚಿಕೇತ ನಾಯಕ್ ಹಾಗೂ ಶಾಶ್ವತೀ ನಾವಡ ಕಾರ್ಯಕ್ರಮ ನಿರೂಪಿಸಿ, ಪ್ರಣವ ಮೂಡಿತ್ತಾಯ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ವಿದ್ಯಾರ್ಥಿಗಳಿಂದ ನೃತ್ಯ, ಜನಪದ ಪ್ರಕಾರಗಳ ಪ್ರದರ್ಶನ, ಸಮೂಹ ಗಾಯನ, ಉಳ್ಳಾಲದ ರಾಣಿ ಅಬ್ಬಕ್ಕ ವೀರಗಾಥೆಯಾಧಾರಿತ ನಾಟಕ, ಸಂಸ್ಥೆಯ ಪ್ರಾಧ್ಯಾಪಕ ವರ್ಗದಿಂದ ಸಾಂಸ್ಕೃತಿಕ ಉಡುಗೆಯೊಂದಿಗೆ ರ್‍ಯಾಂಪ್‌ ವಾಕ್ ನಡೆಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿ ಶ್ರವಣ್ ಉಡುಪ ನಿರೂಪಿಸಿದರು.

Latest Articles

error: Content is protected !!