ಕಾರ್ಕಳ : ಭಾರತೀಯ ಕಿಸಾನ್ ಸಂಘದ ಕಾರ್ಯಾಲಯದಲ್ಲಿ ತಾಲೂಕು ಸಮಿತಿಯ ಮಾಸಿಕ ಸಭೆಯು ನ.1 ಬೆಳಗ್ಗೆ 10:30ಕ್ಕೆ ಜರುಗಿತು. ಭಾ.ಕಿ.ಸಂಘದ ಅಧ್ಯಕ್ಷ ಗೋವಿಂದರಾಜ್ ಭಟ್ ಮಾತನಾಡಿ, ಈಗಾಗಲೇ ಹೈನುಗಾರರು ಹಾಲಿನ ಖರೀದಿ ದರ ಏರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಇದುವರೆಗೆ ಸೂಕ್ತ ಸ್ಪಂದನೆ ಬಂದಿರುವುದಿಲ್ಲ. ಹಾಲಿನ ಉತ್ಪಾದನಾ ವೆಚ್ಚವು ಅತೀವ ಹೆಚ್ಚಾಗಿದ್ದು ಇತ್ತೀಚೆಗೆ ಪಶು ಆಹಾರದ ಬೆಲೆಯೂ ಕೂಡಾ ಗಗನಕ್ಕೇರಿದೆ. ಇದರ ಪರಿಣಾಮವಾಗಿ ಹೈನುಗಾರರು ಹೈನುಗಾರಿಕೆಯಿಂದ ವಿಮುಖರಾಗುವ ಭೀತಿ ಉಂಟಾಗಿದೆ. ಈಗಾಗಲೇ ಪ್ರತೀ ಒಕ್ಕೂಟಗಳಿಗೆ ಬರುವ ಹಾಲಿನ ಪ್ರಮಾಣವು ಶೇಕಡಾ 15 ರಿಂದ20ರಷ್ಟು ಕಡಿಮೆಯಾಗಿದೆ. ಹೈನುಗಾರಿಕೆಗೆ ಹೊಡೆತ ಬಿದ್ದಲ್ಲಿ ಅದು ನೇರವಾಗಿ ಕೃಷಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಆದ ಕಾರಣ ಸರಕಾರ ತಕ್ಷಣ ಹಾಲಿನ ಖರೀದಿ ದರವನ್ನು ಏರಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸಿದರು. ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಕೊಳೆರೋಗ ಬಾಧಿಸಿದ್ದು ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ರೈತರು ಅಡಿಕೆ ಕೊಳೆರೋಗದ ಪರಿಹಾರ ಕೋರಿ ತಮ್ಮ ಗ್ರಾಮಗಳಲ್ಲಿ ಗ್ರಾಮಕರಣಿಕರಿಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು. ಈಗಾಗಲೇ ಬೆಳೆವಿಮೆಯ ಪರಿಹಾರದ ಕುರಿತು ಕಂತುಗಳು ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದ್ದು ಈ ಬಗ್ಗೆ ರೈತರು ತಮ್ಮ ಖಾತೆ ಹೊಂದಿದ ಬ್ಯಾಂಕ್ಗಳನ್ನು ಸಂಪರ್ಕಿಸುವಂತೆ ತಿಳಿಸಿದರು. ಈ ಬಗ್ಗೆ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಭಾ.ಕಿ.ಸಂ ಕಛೇರಿಯನ್ನು ಸಂಪರ್ಕಿಸುವಂತೆ ವಿನಂತಿಸಿದರು. 2023ರ ಜನವರಿ ತಿಂಗಳಲ್ಲಿ ಜಿಲ್ಲಾ ಸಮ್ಮೇಳನವು ನಡೆಯಲಿದ್ದು, ಇದರ ಪೂರ್ವ ತಯಾರಿಯ ಮಾಹಿತಿಯನ್ನು ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ರವರು ಸಭೆಗೆ ನೀಡಿದರು. ಸಭೆಯಲ್ಲಿ ಹರೀಶ್ ಕಲ್ಯಾ, ಕೆ.ಪಿ.ಭಂಡಾರಿ ಕೆದಿಂಜೆ, ಸುಂದರ ಶೆಟ್ಟಿ ಮುನಿಯಾಲು, ಶಿವಪ್ರಸಾದ್ ಭಟ್ ದುರ್ಗಾ, ಅನಂತ ಭಟ್ ಇರ್ವತ್ತೂರು ಹಾಗೂ ಗ್ರಾಮ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಈದು ಶೈಲೇಶ್ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಕುಕ್ಕುಂದೂರಿನ ಅನಂತ್ ನಾಯಕ್ ಅವರಿಗೆ ಶ್ರದ್ಧಾಂಜಲಿಯನ್ನು ಭಾರತೀಯ ಕಿಸಾನ್ ಸಂಘದ ವತಿಯಿಂದ ಸಲ್ಲಿಸಲಾಯಿತು.