ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕ ವತಿಯಿಂದ ನಾಟಿ ವೈದ್ಯ ಒಳಬೈಲು ಮಹಾಬಲ ನಾಯಕ್ ಅವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷತೆಯನ್ನು ಕಸಾಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್ ಅವರು ಮಾತನಾಡಿ ಮಹಾಬಲ ನಾಯಕ್ ಅವರ ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಹೆಬ್ರಿ ತಾಲ್ಲೂಕು ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷ ರಮೇಶ್ ಪೂಜಾರಿ ಅವರು ನಾಟಿ ವೈದ್ಯ ಪದ್ಧತಿಯನ್ನು ಮುಂದಿನ ಪೀಳಿಗೆಯವರು ಮುನ್ನಡೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಶಿವಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಶೇಖರ್ ಶೆಟ್ಟಿ ಅವರು ಗಿಡಮೂಲಿಕೆ ಬೆಳೆಯಲು ಅನುಕೂಲ ಆಗುವಂತೆ ಸರಕಾರದ ವತಿಯಿಂದ ನೀರಿನ ವ್ಯವಸ್ಥೆ ಮಾಡಿಸಿಕೊಡುವ ಭರವಸೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮಾನಂದ ಶೆಟ್ಟಿ, ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾದ ವೀಣಾ ಆರ್. ಭಟ್, ಪುಷ್ಪಾವತಿ, ಶೈಲಜಾ ಶಿವಪುರ, ಮಹೇಶ್ ಹೈಕಾಡಿ, ಕಬ್ಬಿನಾಲೆ ಬಾಲಚಂದ್ರ ಹೆಬ್ಬಾರ್, ವಿದ್ಯಾ ಜನಾರ್ದನ್, ಪ್ರೇಮಾ ಬೀರಾದಾರ್, ಹಿರಿಯರಾದ ಮ.ಮ.ಹೆಬ್ಬಾರ್ ಕುಚ್ಚೂರು ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಡಾ. ಪ್ರವೀಣ ಕುಮಾರ್ ಎಸ್ ಅವರು ಸ್ವಾಗತಿಸಿದರು. ಮಂಜುನಾಥ್ ಕುಲಾಲ್ ನಿರೂಪಿಸಿದರು. ಶೋಭಾ.ಆರ್ . ಕಲ್ಕೂರ್ ಪ್ರಾರ್ಥಿಸಿದರು ಪ್ರೀತೇಶ್ ಶೆಟ್ಟಿ ವಂದಿಸಿದರು.
ನಾಟಿ ವೈದ್ಯ ಒಳಬೈಲು ಮಹಾಬಲ ನಾಯಕ್‌ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
