ವಿದ್ಯಾರ್ಥಿಗಳು ತಮ್ಮನ್ನು ಹೊಸ ಮನ್ವಂತರದ ಅಗತ್ಯತೆಗಳಿಗೆ ಮಾರ್ಪಾಡು ಮಾಡಿಕೊಳ್ಳಬೇಕು : ಡಾ. ಅಮಿತಾ ಪಿ. ಮಾರ್ಲ

ಮೂಡುಬಿದಿರೆ : ಆರೋಗ್ಯ ಕ್ಷೇತ್ರವು ಮುಂದಿನ ಏಳರಿಂದ ಹತ್ತು ವರ್ಷಗಳಲ್ಲಿ ಶೇಕಡಾ 300ರಷ್ಟು ಬೆಳೆಯಲಿದ್ದು, 4.7 ಮಿಲಿಯನ್‍ನಿಂದ 5ಮಿಲಿಯನ್ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಎ.ಜೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯಕೀಯ ಆಡಳಿತದ ನಿರ್ದೇಶಕಿ ಡಾ. ಅಮಿತಾ ಪಿ. ಮಾರ್ಲ ತಿಳಿಸಿದರು. ಅವರು ಆಳ್ವಾಸ್ ಕಾಲೇಜ್ ಆಫ್ ಆಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಹಾಸ್ಪಿಟಲ್ ಆಡ್ಮಿನ್‍ಸ್ಟ್ರೇಶನ್ ವಿಭಾಗವು ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಹಾಗೂ ಕಾರ್ಯಾಗಾರ 2022ರ ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಾಸ್ಪಿಟಲ್ ಆಡ್ಮಿನ್‍ಸ್ಟ್ರೇಶನ್ ಕ್ಷೇತ್ರವು ಮುಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆಯ ಕ್ಷೇತ್ರವಾಗಿ ಮೂಡಿ ಬರಲಿದ್ದು, ಈ ಕಾಲಕ್ಕನುಗುಣವಾದ ಸೃಜನಾಶೀಲತೆ ಹಾಗೂ ಜ್ಞಾನವನ್ನು ವಿದ್ಯಾರ್ಥಿಗಳು ಹೊಂದುವುದು ಮುಖ್ಯ. ಅಲ್ಲದೆ ಈ ಕ್ಷೇತ್ರದ ಭವಿಷ್ಯದ ಸವಾಲುಗಳು ಹಾಗೂ ಅನಿಶ್ಚಿತತೆಗಳನ್ನು ಅರಿಯುವುದು ಸಹ ಅಷ್ಟೇ ಅಗತ್ಯ ಎಂದರು. ಜಾಗತೀಕರಣ, ರೋಗಿಗಳ ಸುರಕ್ಷತೆ, ಹೊಸಶಿಕ್ಷಣ ನೀತಿ, ಹಾಗೂ ಡಿಜಿಟಲ್ ರೂಪಾಂತರದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಹೊಸ ಮನ್ವಂತರದ ಅಗತ್ಯತೆಗಳಿಗೆ ಮಾರ್ಪಾಡು ಮಾಡಿ ಕೊಂಡರೆ ಉಜ್ವಲ ಭವಿಷ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಡಾ. ವಿನಯ್ ಆಳ್ವ ಮಾತನಾಡಿ, ಈ ಭೂಮಿಯ ಮೇಲೆ ಎಲ್ಲಿಯವರೆಗೆ ಮನುಕುಲದ ಅಸ್ವಿತ್ವವಿರುತ್ತದೋ ಅಲ್ಲಿಯವರೆಗೂ ಆರೋಗ್ಯ ಕ್ಷೇತ್ರಕ್ಕೆ ಬೇಡಿಕೆ ಇರುತ್ತದೆ. ಬೇರೆ ಯಾವ ಕ್ಷೇತ್ರವಾದರೂ ಹಿನ್ನಡೆ ಸಾಧಿಸಬಹುದು ಆದರೆ ಆರೋಗ್ಯ ಕ್ಷೇತ್ರ ಕುಸಿತ ಕಾಣಲು ಸಾಧ್ಯವಿಲ್ಲ ಎಂದರು. ತಾಂತ್ರಿಕ ಅವಧಿಯಲ್ಲಿ ಮಣಿಪಾಲ ಗ್ರೂಪ್ಸ್ ಸ್ಟೆಂಪ್ಯುಟಿಕ್ಸ್ ಇನೋವೇಶನ್ ಮತ್ತು ಬ್ಯುಸಿನೆಸ್ ಡೆವಲಪ್ಮೆಂಟ್‍ನ ನಿರ್ದೇಶಕ ಡಾ.‌ ಕುನಲ್, ಮಂಗಳೂರಿನ ಯನಪೋಯ ವಿವಿಯ ಡೀನ್ ಡಾ. ಸುನೀತಾ ಸಲ್ಡಾನ್ಹಾ, ಎ.ಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಸಮುದಾಯ ಔಷಧ ವಿಭಾಗದ ಡಾ. ಪ್ರದೀಪ್ ಸೇನಾಪತಿ, ಮುಂಬೈನ ಇಂಪ್ರೆಶನ್ ಕನ್ಸಲ್ಟಿಂಗ್ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ಡಾ.ದಿಲೀಪ್ ಪಿಂಟೋ ಕಾರ್ಯಗಾರ ನಡೆಸಿದರು.
ಕೇರಳ ಹಾಗೂ ಕರ್ನಾಟಕದ ಎಸ್ಟರ್ ಮಿಮ್ಸ್, ಸೈಂಟ್ ಜಾನ್ಸ್, ಪದ್ಮಾವತಿ ನಿಟ್ಟೆ, ಎ.ಜೆ. ಯೆನಪೋಯಾ ಕಾಲೇಜುಗಳಿಂದ 340ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೋಸ್ಟರ್ ಪ್ರಸೆಂಟೇಶನ್ ಸ್ಪರ್ಧೆಯಲ್ಲಿ ಎಜೆ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಪ್ರಥಮ ಬಹುಮಾನ, ಯನಪೋಯಾ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ಹನಾ ಶೆಟ್ಟಿ, ಆಳ್ವಾಸ್ ಕಾಲೇಜ್ ಆಫ್ ಆಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಪ್ರಾಚಾರ್ಯ ಡಾ. ಶಂಕರ್ ಶೆಟ್ಟಿ, ಹಾಸ್ಪಿಟಲ್ ಆಡ್ಮಿನ್‍ಸ್ಟ್ರೇಶನ್ ವಿಭಾಗದ ಮುಖ್ಯಸ್ಥ ಆದರ್ಶ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಅನುಷಾ ಶೆಟ್ಟಿ ಸ್ವಾಗತಿಸಿ, ಹಾಸ್ಪಿಟಲ್ ಆಡ್ಮಿನ್‍ಸ್ಟ್ರೇಶನ್ ವಿಭಾಗದ ಮುಖ್ಯಸ್ಥ ಆದರ್ಶ ಹೆಗ್ಡೆ ವಂದಿಸಿದರು. ವಿದ್ಯಾರ್ಥಿಗಳಾದ ಅಲ್‍ನಾಝ್, ಡ್ಯಾನಿ ಜೋಸೆಫ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Scroll to Top