ವರಾಹ ರೂಪಂ…ಹಾಡಿನ ವಿವಾದ : ಥೈಕುಡಂ ಬ್ರಿಜ್‌ನ ಬೇಡಿಕೆ ಇಷ್ಟೇ!

ನಮಗೆ ಇಷ್ಟು ಕೊಟ್ಟರೆ ಸಾಕು ಎಂದ ಮ್ಯೂಸಿಕ್‌ ಬ್ಯಾಂಡ್‌

ಬೆಂಗಳೂರು : ಕಾಂತಾರ ಚಿತ್ರದ ವರಾಹ ರೂಪಂ…ಹಾಡು ತನ್ನ ನವರಸಂ ಹಾಡಿನ ನಕಲು ಎಂದು ಆರೋಪಿಸಿದ್ದ ಕೇರಳದ ಥೈಕುಡಂ ಬ್ರಿಜ್‌
ಮ್ಯೂಸಿಕ್‌ ಬ್ಯಾಂಡ್‌ ಇದೀಗ ಚಿತ್ರದ ನಿರ್ಮಾಪಕರ ಎದುರು ತನ್ನ ಬೇಡಿಕೆಯನ್ನು ಮುಂದಿಟ್ಟಿದೆ. ಥೈಕುಡಂ ಬಿಜ್‌ನ ದೂರಿನ ಹಿನ್ನೆಲೆಯಲ್ಲಿ ಕೇರಳದ ನ್ಯಾಯಾಲಯ ಈ ಹಾಡನ್ನು ಪ್ರಸಾರ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಆದೇಶ ಪ್ರತಿ ಕೈಸೇರಿದ ಬಳಿಕ ಈ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಹೊಂಬಾಳೆ ಫಿಲ್ಮ್ಸ್‌ ಹೇಳಿತ್ತು. ಈ ನಡುವೆ ಥೈಕುಡಂ ಬ್ರಿಜ್‌ ತನ್ನ ಬೇಡಿಕೆಯನ್ನು ತಿಳಿಸಿದೆ.
ಹಣಕ್ಕಾಗಿ ಇಷ್ಟೆಲ್ಲ ಮಾಡುತ್ತಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ಆದರೆ ನಮಗೆ ಹಣ ಮುಖ್ಯವಲ್ಲ ಎಂಬುದು ಥೈಕುಡಂ ಬ್ರಿಜ್‌
ಸ್ಪಷ್ಟಪಡಿಸಿದೆ.
ಕೋರ್ಟ್​ನ ಆದೇಶದ ಪ್ರತಿ ಕೈ ಸೇರಿದ ನಂತರ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತುಂಬ ಮುಖ್ಯ. ನಮಗೆ ಕ್ರೆಡಿಟ್ ಕೊಟ್ಟರೆ ಈ ಹಾಡನ್ನು ಅವರು ಪ್ಲೇ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಥೈಕುಡಂ ಬ್ರಿಜ್‌ ಬ್ಯಾಂಡ್​ನ ವಿಯಾನ್ ಫರ್ನಾಂಡಿಸ್ ಹೇಳಿದ್ದಾರೆ.
ದೊಡ್ಡ ನಿರ್ಮಾಣ ಸಂಸ್ಥೆ ವಿರುದ್ಧ ಸ್ವತಂತ್ರ ಬ್ಯಾಂಡ್​ ಹೋರಾಡುತ್ತಿರುವುದು ಇದೇ ಮೊದಲು. ತಮ್ಮಲ್ಲಿರುವ ಹಣ, ಅಧಿಕಾರದಿಂದ ಪಾರಾಗಬಹುದು ಎಂದು ಅವರು ಭಾವಿಸಿರಬಹುದು. ಸಂಗೀತ ಲೋಕಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೇ ಆದರೂ ನಮಗೆ ಖುಷಿಯಿದೆ. ನಾವು ಸುಮ್ಮನೆ ಕೂತಿಲ್ಲ, ದಿಟ್ಟ ಹೆಜ್ಜೆ ತೆಗೆದುಕೊಂಡೆವು ಎಂಬ ತೃಪ್ತಿ ನಮ್ಮಲ್ಲಿರುತ್ತದೆ ಎಂದಿದ್ದಾರೆ.
ಕೆಲವು ಹಾಡುಗಳ ಮಧ್ಯೆ ಹೋಲಿಕೆ ಇರುತ್ತದೆ. ಅದು ಸಾಮಾನ್ಯ. ಹೀಗಾಗಿ, ಆರಂಭದಲ್ಲಿ ಈ ವಿಚಾರದಲ್ಲಿ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಕಮೆಂಟ್​ಗಳು, ಮೆಸೇಜ್​ಗಳು, ದೂರವಾಣಿ ಕರೆಗಳು ನಿಲ್ಲಲೇ ಇಲ್ಲ. ಹೀಗಾಗಿ ಕೇಸ್ ಹಾಕಿದೆವು. ಯೂಟ್ಯೂಬ್ ಚಾನೆಲ್​​ನಲ್ಲಿ ‘ವರಾಹ ರೂಪಂ..’ ಹಾಡಿಗೆ ಬಂದ ಅನೇಕ ಕಮೆಂಟ್​ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Latest Articles

error: Content is protected !!