ಉಡುಪಿ : ಕರ್ಜೆ- ಹೆಬ್ರಿ ಮುಖ್ಯ ರಸ್ತೆಯಿಂದ ಕೆಂಜೂರು ಮನೆ ಮಾರ್ಗವಾಗಿ ಬೀರ್ಲಬೆಟ್ಟುವಿನಿಂದ ಹೆಬ್ರಿ ಮಂದಾರ್ತಿ ಸಂಪರ್ಕ ರಸ್ತೆ ಅಭಿವೃದ್ಧಿ ಸಂದರ್ಭ ಖಾಸಗಿ ಜಾಗದವರು ತಕರಾರು ತೆಗೆದ ಹಿನ್ನೆಲೆಯಲ್ಲಿ ಸೋಮವಾರ ಉಡುಪಿ ಶಾಸಕ ರಘುಪತಿ ಭಟ್ ಸ್ಥಳಕ್ಕೆ ಭೇಟಿ ನೀಡಿದರು. ಉಡುಪಿ ವಿಧಾನಸಭಾ ಕ್ಷೇತ್ರದ ಕಳ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀರ್ಲಬೆಟ್ಟುವಿನಿಂದ ಹೆಬ್ರಿ ಮಂದಾರ್ತಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ 5 ಕೋಟಿ ರೂ. ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿತ್ತು. ಈ ಸಂದರ್ಭ ಖಾಸಗಿಯವರು ಜಾಗಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದಿದ್ದರು. ಸೋಮವಾರ ಸ್ಥಳಕ್ಕಾಗಮಿಸಿದ ಶಾಸಕರು ಖಾಸಗಿ ಜಾಗದವರೊಂದಿಗೆ ಚರ್ಚಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ರಸ್ತೆ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ಶಾಸಕ ಮನವಿಗೆ ಸ್ಪಂದಿಸಿದ ಜಾಗದ ಮಾಲಕರು ರಸ್ತೆಗೆ ಜಾಗವನ್ನು ಬಿಟ್ಟುಕೊಡಲು ಸಮ್ಮತಿ ಸೂಚಿಸಿದರು. ಕಳ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಆದರ್ಶ್ ಶೆಟ್ಟಿ, ದಿನೇಶ್ ಶೆಟ್ಟಿ, ರಮಾನಂದ ಶೆಟ್ಟಿ, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀನಾಥ್, ನಾಗಶಯನ, ಗುತ್ತಿಗೆದಾರರಾದ ಧೀರಜ್, ಸ್ಥಳೀಯರಾದ ಸತೀಶ್ ಶೆಟ್ಟಿ, ನವನೀತ್ ಶೆಟ್ಟಿ, ಹರೀಶ್ ಶೆಟ್ಟಿ, ಶಾಂತಾರಾಜ್ ಶೆಟ್ಟಿ, ಕೃಷ್ಣ ನಾಯ್ಕ, ರವಿ ನಾಯ್ಕ ಈ ಸಂದರ್ಭದಲ್ಲಿದ್ದರು.
ಹೆಬ್ರಿ : ರಸ್ತೆ ಅಭಿವೃದ್ಧಿ ಸಂದರ್ಭ ಖಾಸಗಿ ಜಾಗದವರ ತಕರಾರು – ಶಾಸಕ ರಘುಪತಿ ಭಟ್ ಮನವೊಲಿಕೆ
