Tuesday, December 6, 2022
spot_img
Homeಸ್ಥಳೀಯ ಸುದ್ದಿಕಾಂತಾವರ ಉತ್ಸವ - 2022

ಕಾಂತಾವರ ಉತ್ಸವ – 2022

ಸಾಹಿತ್ಯ ನಾಡು ನುಡಿಯ ಏಳಿಗೆಗೆ ಪ್ರೇರಕ – ಪ್ರೊ. ಬಿ. ಜಗದೀಶ್‌

ಕಾರ್ಕಳ : ಸಾಹಿತ್ಯದಲ್ಲಿ ಕಟ್ಟಿಕೊಟ್ಟಿರುವ ಸಾಲುಗಳು ನಾಡು ನುಡಿಯ ಏಳಿಗೆಗೆ ಪ್ರೇರಕವಾಗುವುದು. ಯಾವುದೇ ಹಿಂಜರಿಕೆಯಿಲ್ಲದೇ ವ್ಯಕ್ತಿ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾನೋ ಆಗ ಮಾತ್ರ ಬದಲಾವಣೆ ಸಾಧ್ಯ. ಪ್ರತಿಯೊಂದು ಯಶಸ್ವಿ ನಾಡು ನೆಲೆನಿಂತಿರುವುದು ತಾಯಿ ನುಡಿಯ ಸಮೃದ್ಧತೆಯಿಂದ ಎಂಬುದನ್ನು ಮರೆಯುವಂತಿಲ್ಲ ಎಂದು ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಬಿ. ಜಗದೀಶ ಶೆಟ್ಟಿ ಹೇಳಿದರು. ಅವರು ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ, ಕರ್ಣಾಟಕ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಸೆಲ್ಕೊ ಸೋಲಾರ್ ಸಂಸ್ಥೆಯ ಸಹಕಾರದೊಂದಿಗೆ ಕಾಂತಾವರದ ಕನ್ನಡ ಸಂಘದಲ್ಲಿ ನಡೆದ ಕಾಂತಾವರ ಉತ್ಸವ, ದತ್ತಿನಿಧಿ ಮತ್ತು ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಸಂಪಾದಕ ಡಾ. ಬಿ. ಜನಾರ್ಧನ ಭಟ್‌ ಮಾತನಾಡಿ, ಸಾಹಿತ್ಯದ ಮೂಲಕ ಕನ್ನಡ ಸಂಸ್ಕೃತಿಯ ಏಕೀಕರಣ ಸಾಧ್ಯ. ಗ್ರಂಥಮಾಲೆಯ ಮೂಲಕ ಸಾಹಿತಿಗಳನ್ನು ಮತ್ತು ಸಾಹಿತ್ಯಾಭಿರುಚಿ ಬೆಳೆಸಿದ ಸಾಧಕರನ್ನು ಗುರುತಿಸುವ ಕಾರ್ಯವಾಗಿದೆ ಎಂದರು.

11 ಪುಸ್ತಕ ಅನಾವರಣ

ಶ್ರೀನಿವಾಸ ದೇಶಪಾಂಡೆ ರಚಿಸಿದ ಪಿ. ಜಯರಾಮ್‌ ಭ ಟ್‌, ಮೋಹನ್‌ ಭಾಸ್ಕರ್‌ ಹೆಗಡೆ ಬರೆದಿರುವ ಗಿರಿಧರ ಕಜೆ. ಚೇತನ್ ಮುಂಡಾಜೆ ಬರೆದಿರುವ ಡಾ. ಪ್ರಭಾಕರ್‌ ನೀರುಮಾರ್ಗ, ರವಿ ಮಡೋಡಿಯವರ ಕೃತಿ ಶ್ರೀಧರ್ ಡಿ.ಎಸ್., ಪಾದೆಕಲ್ಲು ವಿಷ್ಣುಭಟ್‌ ಬರೆದಿರುವ ಶ್ರೀ ತಾಳ್ತಜೆ ಕೃಷ್ಣ ಭಟ್ಟ, ಶೈಲೇಶ್ ಠೋಸರ್ ಅವರ ಆರ್.‌ಎನ್.‌ ಬಿಢೆ, ಗಾಯತ್ರಿ ಉಡುಪ ಅವರ ಕೊ.ಆ. ಉಡುಪ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಕ.ಪು. ಸೀತಾರಾಮ ಕೆದಿಲಾಯ, ಬಾಲಮಧುಕರ ಕಾನನ ಅವರ ಎಂ.ವಿ. ಭಟ್‌ ಮಧುರಂಗಾನ, ಡಾ. ಸುಭಾಸ್ ಪಟ್ಟಾಜೆಯವರ ಎ. ನರಸಿಂಹ ಭಟ್‌ ಕೃತಿಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘ ಸಂಸ್ಥೆ ಮತ್ತು ಸಾಹಿತಿಗಳಿಗೆ ಪ್ರಶಸ್ತಿ ಹಸ್ತಾಂತರಿಸಲಾಯಿತು. ಹರಿಹರದ ಗುರುಕುಲ ಪ್ರಬೋಧಿನಿ ಟ್ರಸ್ಟ್‌ಗೆ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ, ರಂಗಕರ್ಮಿ ಶ್ರೀ ಹರ್ಷವರ್ಧನ ಡಂಬಳರವರಿಗೆ ಮಂಜನಬೈಲ್‌ ರಂಗ ಸನ್ಮಾನ್‌ ಪ್ರಶಸ್ತಿ, ಪತ್ರಕರ್ತ ಎನ್‌. ಗುರುರಾಜ್‌ ಅವರಿಗೆ ಪಾವೆಂ ಮಾಧ್ಯಮ ಪ್ರಶಸ್ತಿ, ಯಕ್ಷಗಾನ ಕಲಾವಿದ ಶ್ರೀಧರ ಡಿ.ಎಸ್. ಅವರಿಗೆ ಶ್ರೇಷ್ಠ ಶಿಕ್ಷಕ ಸೌರಭ, ಸಾಹಿತಿ ಪ್ರೊ. ಆರ್‌. ಶೇಷಶಾಸ್ತ್ರಿಗೆ ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ, ಇತಿಹಾಸ ಸಂಶೋಧಕ ಡಾ. ಪುಂಡಿಕಾಯಿ ಗಣಪಯ್ಯ ಭಟ್‌ಗೆ ಕಾಂತಾವರ ಸಾಹಿತ್ಯ ಪ್ರಶಸ್ತಿ, ಸಾಹಿತಿ ಡಾ. ವಾರಿಜಾ ಎನ್‌. ಅವರಿಗೆ ಮಹೋಪಾಧ್ಯಾಯ ಪ್ರಶಸ್ತಿ, ಸಾಹಿತ್ಯ ವಿಮರ್ಶಕ ಸುಭಾಷ್‌ ರಾಜಮಾನೆಯವರಿಗೆ ಕಾಂತಾವರ ಸಾಹಿತ್ಯ ವಿಮರ್ಶ ಪ್ರಶಸ್ತಿ ಮತ್ತು ಪರಿಸರವಾದಿ ಕೆ. ಚಂದ್ರಮೌಳಿಯವರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೊಗಸಾಲೆ ಕಾರ್ಯ ಶ್ಲಾಘನೀಯ – ಡಾ. ಗೋಪಾಲ ಮರಾಠೆ
ಮೈಸೂರು ವಿಶ್ವವಿದ್ಯಾಲಯದ ಅಣುವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಗೋಪಾಲ ಮರಾಠೆ ಕೆ. ಮಾತನಾಡಿ, ಒಂದು ವಿಶ್ವವಿದ್ಯಾಲಯ ಮಾಡಲು ಸಾಧ್ಯವಾಗದ ಕೆಲಸವನ್ನು ಕಾಂತಾವರ ಕನ್ನಡ ಸಂಘದಿಂದಾಗುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗ್ರಾಮೀಣ ಪರಿಸರದ ಬರಹಗಾರರನ್ನು ಗುರುತಿಸುವ ಕಾರ್ಯ ಮಾಡುತ್ತಿರುವ ಕಾಂತಾವರ ಕನ್ನಡ ಸಂಘದ ಕಾರ್ಯ ಸ್ಮರಣೀಯ. ಅದರ ಸ್ಥಾಪಕಾಧ್ಯಕ್ಷರಾಗಿರುವ ಡಾ. ನಾ. ಮೊಗಸಾಲೆ ಕಾರ್ಯ ‍‍ಶ್ಲಾಘನೀಯವೆಂದರು.

ವಿಷಾದನೀಯ – ಹರಿಕೃಷ್ಣ ಪುನರೂರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕನ್ನಡ ರಾಜ್ಯೋತ್ಸವ ದಿನದಂದು ಕಾಂತಾವರ ಕನ್ನಡ ಸಂಘದಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗುತ್ತಿರುವುದು ಉತ್ತಮ ವಿಚಾರ. ಕನ್ನಡ ಸಾಹಿತ್ಯದ ನಡೆ-ನುಡಿಗೆ ನೀಡುವ ನಿಜವಾದ ಗೌರವವಾಗಿದೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತಿರುವ ಕನ್ನಡ ಸಂಘದ ಕೆಲಸ ಅಭಿನಂದನಾರ್ಹವಾದುದು. ಆದರೆ ಸರಕಾರ ಕಾಂತಾವರ ಕನ್ನಡ ಸಂಘದ ಕಾರ್ಯವೈಖರಿಯ ಬಗ್ಗೆ ಗಮನಹರಿಸದೆ ಇರುವುದು ವಿಷಾದನೀಯವೆಂದರು. ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ. ನಾ. ಮೊಗಸಾಲೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ, ಸತೀಶ್‌ ಕುಮಾರ್‌ ಕೆಮ್ಮಣ್ಣು ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!