ದೇಶಾಭಿಮಾನದ ಜೊತೆಗೆ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು- ಡಾ.ಲೀನಾ ನಾಯ್ಕ
ಕಾರ್ಕಳ: ನಾವು ದೇಶಾಭಿಮಾನದ ಜೊತೆಗೆ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡಿಗರು ಕನ್ನಡವನ್ನು ಜನಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ಬಳಕೆಯಲ್ಲಿ ಯಾವುದೇ ಕೀಳರಿಮೆ ಇರಬಾರದು ಎಂದು ಮೂಡುಬೆಳ್ಳೆ ಜ್ಞಾನಗಂಗಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಲೀನಾ ನಾಯ್ಕ ಹೇಳಿದರು. ಅವರು ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡದ ಕೀರ್ತಿ ಜಗದಗಲ ಪಸರಿಸುವಂತೆ ಮಾಡುವುದು ಕನ್ನಡಿಗರ ಕರ್ತವ್ಯ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್ ಮಾತನಾಡಿ, ಕನ್ನಡ ಅಕ್ಷರಗಳ ಉಚ್ಚಾರಣೆ ಎನ್ನುವುದು ಅದ್ಭುತವಾದ ವ್ಯಾಯಾಮ ಇದ್ದ ಹಾಗೆ, ಅಂತಹ ವಿಶಿಷ್ಟ ವೈಜ್ಞಾನಿಕ ಮಾದರಿಯ ಲಿಪಿ ಜೋಡಣೆ ಕನ್ನಡ ಭಾಷೆಯಲ್ಲಿದೆ. ಇಂತಹ ಭಾಷೆಯನ್ನು ಪಡೆದುದರ ಬಗ್ಗೆ ಕನ್ನಡಿಗರು ಹೆಮ್ಮೆಪಟ್ಟುಕೊಳ್ಳಬೇಕು ಎಂದು ಹೇಳಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಸ್ವರ್ಣಲತಾ ಹಾಗೂ ವಿದ್ಯಾರ್ಥಿನಿ ವೈಷ್ಣವಿ ಜೆ ಆಚಾರ್ಯ ಕನ್ನಡ ರಾಜ್ಯೋತ್ಸವದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಂದ ಕನ್ನಡ ಭಾಷಾಭಿಮಾನ ಬಿಂಬಿಸುವ ಗೀತೆಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಿದವು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಡೊಮೊನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೇರಿಯನ್ ಡಿ’ಸೋಜ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಧೀಕ್ಷಾ ಸ್ವಾಗತಿಸಿ ಸಾನಿಯಾ ಅತಿಥಿಗಳನ್ನು ಪರಿಚಯಿಸಿದರು. ಸ್ತುತಿ ಜೈನ್ ಕಾರ್ಯಕ್ರಮ ನಿರೂಪಿಸಿ, ವಿಜಯಲಕ್ಷ್ಮೀ ವಂದಿಸಿದರು.