Thursday, December 1, 2022
spot_img
HomeUncategorizedಕನ್ನಡ ಮಾತನಾಡುವುದು ಅಭಿಮಾನದ ಸಂಗತಿಯಾಗಬೇಕು - ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ

ಕನ್ನಡ ಮಾತನಾಡುವುದು ಅಭಿಮಾನದ ಸಂಗತಿಯಾಗಬೇಕು – ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ

ಕಾರ್ಕಳ : ಕನ್ನಡ ಮಾತನಾಡುವುದು ಅಭಿಮಾನದ ಸಂಗತಿಯಾಗಬೇಕೆ ಹೊರತು ಮುಜುಗರದ ಸಂಗತಿಯಲ್ಲ. ಮನೆಮನೆಯಲ್ಲೂ ಕನ್ನಡ ಬಳಕೆಯಾಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ನ. 1ರಂದು ತಾಲೂಕು ಆಡಳಿತ, ಪುರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಂಗಣದಲ್ಲಿ ನಡೆದ ರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಕ್ಕಾಗಿ ನಡೆದ ರೀತಿಯಲ್ಲೇ ನಾಡು ನುಡಿಗಾಗಿ ಚಳುವಳಿ ನಡೆದಿದೆ. ಭಾಷೆಯ ನೆಲೆಯಲ್ಲಿ ಎಲ್ಲರನ್ನೂ ಒಂದುಗೂಡಿಸುವ ಜಾಗೃತಿ ಮೂಡಿಸುವ ಕಾರ್ಯವಾಗಿದೆ. 1915ರಲ್ಲೇ ಕೃಷ್ಣರಾಜ ಒಡೆಯಾರ್‌ ಮತ್ತು ಸರ್‌ ಎಂ. ವಿಶ್ವೇಶ್ವರಯ್ಯ ಕನ್ನಡ ನಾಡು ನುಡಿ ರಕ್ಷಣೆಗಾಗಿಯೇ ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪಿಸಿದ್ದರು. ಕನ್ನಡ ಏಕೀಕರಣಕ್ಕಾಗಿ ಹೋರಾಡಿದವಲ್ಲಿ ಕಾರ್ಕಳದ ಜಿನರಾಜ ಹೆಗ್ಗಡೆ ಪಾಲ್ಗೊಂಡಿರುವುದು ನಮಗೆಲ್ಲ ಹೆಮ್ಮೆಯ ವಿಚಾರವೆಂದರು.

ವಿಷಾದ
ಶಿಕ್ಷಕರ ಕೊರತೆಯಿಂದ ಹಲವಾರು ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಶತಮಾನ ಕಂಡ, ಗ್ರಾಮೀಣ ಭಾಗದ ಕೆಲವೊಂದು ಶಾಲೆಗಳು ಶಿಕ್ಷಕರಿಲ್ಲದೇ, ಕನ್ನಡ ಭಾಷಾ ಶಿಕ್ಷಕರಿಲ್ಲದೇ ಸೊರಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಕೊಂಡಳ್ಳಿಯವರು ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಸರಕಾರ ಬದ್ಧತೆ ತೋರಬೇಕೆಂದರು.

ಸಚಿವ ವಿ. ಸುನೀಲ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಕೋಟಿ ಕಂಠ ಗಾಯನ ಕೇವಲ ಹಾಡಲ್ಲ. ಅದು ಭಾವ, ಮೌಲ್ಯ, ಅಭಿಮಾನ, ಪ್ರೀತಿಯಾಗಿದೆ. ಸುನೀಲ್‌ ಕುಮಾರ್‌ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕ ಕನ್ನಡಕ್ಕಾಗಿ ಸಾಕಷ್ಟು ಕಾರ್ಯಗಳಾಗಿದೆ ಎಂದರು.
ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್., ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಸ್ವಾಗತಿಸಿದರು. ಶಿಕ್ಷಕರಾದ ದೇವದಾಸ ಕೆರೆಮನೆ, ಗಣೇಶ್ ಜಾಲ್ಸೂರು ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಚಂದ್ರಯ್ಯ ವಂದಿಸಿದರು. ಸಭಾ ಕಾರ್ಯಕ್ರಮದ ಅನಂತರ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌ ಮತ್ತು ಸದಸ್ಯರು ಪ್ರಸಿದ್ಧ ಕನ್ನಡ ಹಾಡಿಗೆ ನೃತ್ಯ ಮಾಡಿದರು.

ಸಭಾ ಕಾರ್ಯಕ್ರಮಕ್ಕೂ ಕಾರ್ಕಳ ಅನಂತಶಯನದಲ್ಲಿ ತಾಯಿ ಭುವನೇಶ್ವರಿ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಲಾಯಿತು. ಬಳಿಕ ಅನಂತಶಯನದಿಂದ ಗಾಂಧಿ ಮೈದಾನವರೆಗೆ ಮೆರವಣಿಗೆ ಸಾಗಿತು. ಕನ್ನಡಾಭಿಮಾನಿಗಳು, ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌ ಧ್ವಜಾರೋಹಣಗೈದು ಸಂದೇಶ ನೀಡಿದರು.

LEAVE A REPLY

Please enter your comment!
Please enter your name here

Most Popular

error: Content is protected !!