ಕಗ್ಗದ ಸಂದೇಶ- ಅನ್ನದ ಋಣವಿರುವ ತನಕ ಬದುಕಿನ ಪಯಣ


ಇಂದು ಮದುವೆಯ ಹಬ್ಬ, ನಾಳೆ ವೈಕುಂಠ ತಿಥಿ|
ಇಂದು ಮೃಷ್ಟಾನ್ನ ಸುಖ, ನಾಳೆ ಭಿಕ್ಷಾನ್ನ||
ಇಂದು ಬರಿಯುಪವಾಸ, ನಾಳೆ ಪಾರಣೆ–ಯಿಂತು|
ಸಂದಿರುವುದನ್ನ ಋಣ-ಮಂಕುತಿಮ್ಮ||

ಇಂದು ಸಂಭ್ರಮದ ಮದುವೆಯ ಹಬ್ಬವಾದರೆ ನಾಳೆ ದುಃಖದ ತಿಥಿ. ಇಂದು ಶುಚಿರುಚಿಯಾದ ಸಂತೋಷದ ಭೋಜನದ ಸುಖವಾದರೆ ನಾಳೆ ಭಿಕ್ಷೆ ಬೇಡಿ ತಿನ್ನುವ ಸ್ಥಿತಿ. ಇಂದು ಪೂರ್ತಿ ಉಪವಾಸವಾದರೆ ನಾಳೆ ಪಾರಣೆಯ ಊಟ. ಹೀಗೆ ಬದುಕಿನಲ್ಲಿ ನಮ್ಮ ಅನ್ನದ ಋಣ ಸಂದಾಯವಾಗುವ ಬಗೆಯನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
‌ಋಣಗಳಲ್ಲಿ ಬಹಳ ಮುಖ್ಯವಾದ್ದು ಅನ್ನದ ಋಣ. ಅದನ್ನು ಯಾರಿಗೆ ಎಷ್ಟು ಮತ್ತು ಹೇಗೆ ಸಂದಾಯವಾಗುವುದು ಎನ್ನುವುದು ಮೊದಲೇ ನಿರ್ಧಾರವಾಗಿರುತ್ತದೆ. ಇದನ್ನು ಹೆಚ್ಚುಕಡಿಮೆ ಮಾಡಲು ಯಾರಿಂದಲೂ ಸಾಧ್ಯವಾಗದು.
ಒಂದಗಳು ಹೆಚ್ಚಿರದು ಒಂದಗಳು ಕೊರೆಯಿರದು|
ತಿಂದು ನಿನ್ನ ಅನ್ನ ಋಣ ತೀರುತಲೆ ಪಯಣ||

Hungry boy eating rice in bowl

ಎನ್ನುವುದನ್ನು ಡಿವಿಜಿಯವರೆ ಇನ್ನೊಂದು ಕಗ್ಗದಲ್ಲಿ ಹೇಳಿದ್ದಾರೆ.
ಅನ್ನದಲ್ಲಿಯೆ ಜೀವವಿದೆ; ಜೀವನವಿದೆ. ಮದುವೆಯ ಊಟ ಎನ್ನುವುದು ಸಂತೋಷದ ಸಂಕೇತವಾದರೆ ನಮ್ಮ ದೃಷ್ಟಿಯಲ್ಲಿ ತಿಥಿ ದುಃಖವನ್ನು ಸೂಚಿಸುತ್ತದೆ. ಜೀವನದಲ್ಲಿ ಸುಖ ಮತ್ತು ದುಃಖ ಎರಡು ಕೂಡಿಕೊಂಡಿರುತ್ತದೆ. ಒಂದು ಸಂದರ್ಭದಲ್ಲಿ ನಮಗೆ ತಿನ್ನಲು ಬೇಕಾದಷ್ಟು ಇರಬಹುದು ಇನ್ನೊಂದು ಸಮಯದಲ್ಲಿ ತಿನ್ನಲು ಏನೂ ಇಲ್ಲದ ಪರಿಸ್ಥಿತಿ ಅಂದರೆ ಅನ್ನಕ್ಕಾಗಿ ಇನ್ನೊಬ್ಬರಲ್ಲಿ ಬೇಡುವ ಪರಿಸ್ಥಿತಿಯೂ ಬರಬಹುದು. ಆದ್ದರಿಂದ ಇದ್ದಾಗ ಅಹಂಕಾರ ಪಡದೆ ಇಲ್ಲದಾಗ ಹತಾಶರಾಗದೆ ಬದುಕನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಉಪವಾಸದಿಂದಲೂ ಹಿತ ಉಪವಾಸ ಮುಗಿಸಿ ಉಣುವ ಭರ್ಜರಿ ಪಾರಣೆಯ ಊಟದಿಂದಲೂ ಸಂತೋಷವೆ!
ಅನ್ನದ ಋಣ ಲೋಕದಲಿ ಯಾರಿಗೆಷ್ಟೋ ಅಷ್ಟೆ|
ತುತ್ತೊಂದು ಹೆಚ್ಚಿಲ್ಲ ಅದು ಕಡಿಮೆಯಿಲ್ಲ||
ಹಿಡಿದು ತಕ್ಕಡಿಯ ಎಲ್ಲೋ ಗಮನಿಸುತಿಹನಿದನೆಲ್ಲ|
ಅನ್ನದಾತನು ಅವನು-ಮುದ್ದುರಾಮ||

ಎಂಬ ಕವಿ ಕೆ. ಶಿವಪ್ಪನವರ ಮಾತಿನಂತೆ ಅನ್ನದ ಋಣ ಮುಗಿದ ತಕ್ಷಣ ನಮ್ಮ ಪ್ರಯಾಣ ಮುಕ್ತಾಯವಾಗುತ್ತದೆ. ಈ ಲೌಕಿಕ ಪಯಣದಲಿ ಕಷ್ಟಸುಖ ಎರಡನ್ನು ಅನುಭವಿಸುತ್ತಾ ಸಾಗಬೇಕಾಗುತ್ತದೆ. ಪರಿಸ್ಥಿತಿ ಯಾವುದೇ ಇರಲಿ ಮನಸ್ಥಿತಿ ದೃಢವಾಗಿರಬೇಕು.
ಬದುಕೊಂದು ನಾಟಕವು ವಿಧಿಯು ನಿರ್ದೇಶಕನು|
ಅದರ ದೃಶ್ಯಗಳೆಲ್ಲ ಕರ್ಮಫಲವು||
ಪದಪಿಂದ ನೀನರಿತು ಅಯಾಯ ಪಾತ್ರಗಳ|
ಹದವರಿತು ಅಭಿನಯಿಸು||

ಎಂಬ ಕವಿ ನಿಜಗುಣರ ಅನುಭವದ ಮಾತಿನಂತೆ ನಾವು ವಿಧಿಯ ಕೈಗೊಂಬೆಗಳು. ಅದರ ನಿರ್ದೇಶನದಂತೆ ಎಲ್ಲ ನಡೆಯುವುದು. ನಮ್ಮ ಕರ್ಮದ ಫಲ ಏನೇ ಇರಲಿ, ಹೇಗೆಯೇ ಬರಲಿ ಅದನ್ನು ನಾವು ಅನುಭವಿಸಲೇಬೇಕು. ಅನ್ನ ಮಾತ್ರವಲ್ಲ ಯಾವುದೇ ಋಣ ಹೇಗೆಯೇ ದೊರೆಯಲಿ ಅದನ್ನು ಹಾಗೆಯೇ ಸಂತೋಷದಿಂದ ಸ್ವೀಕರಿಸಿ ಅನುಭವಿಸುತ್ತಾ ಸಾಗಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಕಸಾಪ, ಕಾರ್ಕಳ

Latest Articles

error: Content is protected !!