ನಾಲ್ಕನೇ ದಿನಕ್ಕೆ ಕಾಲಿಟ್ಟ ಟೋಲ್‌ಗೇಟ್‌ ತೆರವು ಧರಣಿ

ಸುರತ್ಕಲ್‌ ಟೋಲ್‌ಗೇಟ್‌ ಬಳಿ ಹೋರಾಟಗಾರರಿಂದ ಹಗಲು-ರಾತ್ರಿ ಧರಣಿ

ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಟೋಲ್‌ಗೇಟನ್ನು ನ.7ರೊಳಗಾಗಿ ಸ್ಥಗಿತಗೊಳಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ.
ಅ.18 ರಂದು ಟೋಲ್‌ಗೇಟ್‌ ಕಿತ್ತೆಸೆಯಲು ಹೋರಾಟ ಸಮಿತಿ ಸದಸ್ಯರು ಮುತ್ತಿಗೆ ಹಾಕಿದ್ದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ತಡೆದಿದ್ದರು. ಇದೀಗ ಅನಿರ್ದಿಷ್ಟ ಧರಣಿ ನಡೆಯುತ್ತಿದ್ದು, ಟೋಲ್‌ಗೇಟ್‌ ತೆರವಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ, ಉಪವಾಸ ಸತ್ಯಾಗ್ರಹ ನಡೆಸಲು ಹೋರಾಟಗಾರರು ಮುಂದಾಗಿದ್ದಾರೆ.
ಬಿಜೆಪಿಯ ಶಾಸಕರು ಮತ್ತು ಸಂಸದರಿಗೆ ಟೋಲ್ ಗೇಟ್ ತೆರವು ಮಾಡುವ ಇಚ್ಛಾಶಕ್ತಿ ಇಲ್ಲ. ನಾವು ಟೋಲ್‌ಗೇಟ್ ವಿರುದ್ಧ ಎರಡನೇ ಹಂತದ ಪ್ರತಿಭಟನೆಯಲ್ಲಿದ್ದೇವೆ. ಇನ್ನು ಮುಂದಿನ ಹಂತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಶಾಸಕ ಅಭಯಚಂದ್ರ ಜೈನ್‌ ಹೇಳಿದ್ದಾರೆ.
60 ಕಿಲೋ ಮೀಟರ್‌ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್‌ಗೇಟ್‌ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 48 ಕಿಲೋ ಮೀಟರ್‌ ಅಂತರದಲ್ಲಿ 4 ಟೋಲ್‌ಗೇಟ್‌ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್‌ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನ ಎನ್.ಐ.ಟಿ.ಕೆ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಟೋಲ್‌ಗೇಟ್‌, ಹೆಜಮಾಡಿ ಟೋಲ್‌ಗೇಟ್‌ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ಆದರೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್‌ ಗೇಟ್‌ ಇನ್ನೂ ಕೂಡಾ ಕಾರ್ಯಾಚರಿಸುತ್ತಿರುವುದು, ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.







































error: Content is protected !!
Scroll to Top