ಮುನಿಯಾಲು: ಗೋಧಾಮದಲ್ಲಿ ದೇಶಿ ಗೋವುಗಳ ಉತ್ಪನ್ನ ಲೋಕಾರ್ಪಣೆ

ಲೋಕಲ್‌ನಲ್ಲಿ ಬೆಳೆದು ಗ್ಲೋಬಲ್ ಆಗಲಿದೆ – ಎಂ.ಎಸ್. ಮಹಾಬಲೇಶ್ವರ್‌

ಹೆಬ್ರಿ : ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಉನ್ನತ ಸ್ಥಾನವಿದೆ. ನಮ್ಮ ದೇಶಿ ಸಂಸ್ಕೃತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಲು ಮುನಿಯಾಲು ಗೋಧಾಮದಿಂದ ಸಾದ್ಯವಾಗಿದೆ. ದೇಸಿ ಉತ್ಪನ್ನಗಳ ಮೂಲಕ ನಮ್ಮ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ. ಗೋಮಾತೆಯ ಜೊತೆ ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಗೋಧಾಮ ವಹಿಸುತ್ತಿದೆ. ಸ್ವದೇಶಿ ಉದ್ಯಮದತ್ತ ನಮ್ಮ ಯುವಜನತೆಯನ್ನು ಮುನಿಯಾಲು ಗೋಧಾಮ ಸೆಳೆದು ದೇಶಕ್ಕೆ ಮಾದರಿಯಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ ಮತ್ತು ಸಿ.ಇ.ಒ ಎಂ.ಎಸ್. ಮಹಾಬಲೇಶ್ವರ್‌ ಹೇಳಿದರು.

ಅ.30 ರಂದು ಮುನಿಯಾಲು ಸಂಜೀವಿನಿ ಫಾರ್ಮ್ ಮತ್ತು ಡೇರಿ ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದಲ್ಲಿ ದೇಶಿ ಗೋವುಗಳ ವಿವಿಧ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶ್ರೀ ಕೃಷ್ಣನು ನಾನು ಗೋವಿನಲ್ಲಿ ನೆಲೆಸಿದ್ದು ಗೋವುಗಳ ಮಧ್ಯೆಯೇ ವಾಸಿಸುತ್ತೇನೆ ಎಂದು ಶ್ಲೋಕದ ಮೂಲಕ ಲೋಕಕ್ಕೆ ತಿಳಿಸಿದ್ದಾನೆ ಅಂತೆಯೆ ಆಧುನಿಕತೆಯತ್ತ ಸಾಗುತ್ತಿರುವ ಇಂದಿನ ಸಮಾಜದಲ್ಲಿ ರಾಮಕೃಷ್ಣ ಆಚಾರ್ ಮತ್ತು ಸವಿತಾ ಆಚಾರ್ ಅವರು ಮುನ್ನಡೆಸುತ್ತಿರುವ ಗೋಧಾಮದ ಸೇವೆ ವಿಶೇಷವಾಗಿದೆ. ರಾಮಕೃಷ್ಣ ಆಚಾರ್ ಲೋಕಲ್ ನಲ್ಲಿ ಬೆಳೆದು ಗ್ಲೋಬಲ್ ಆಗಿದ್ದಾರೆ ಎನ್ನುತ್ತಾ ಗೋಧಾಮದ ಕಾರ್ಯವೈಖರಿಯ ಬಗ್ಗೆ ಅಭಿನಂದಿಸಿದರು.

ವಿದ್ಯಾರ್ಥಿಗಳು ಗೋಧಾಮಕ್ಕೆ ಭೇಟಿ ನೀಡುವುದು ಸಂತಸ

ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್.ಯಡಪಡಿತ್ತಾಯ ಮಾತನಾಡಿ ಹೆತ್ತ ತಾಯಿಯ ನಂತರದ ಸ್ಥಾನದಲ್ಲಿ ಗೋ ಮಾತೆಯನ್ನು ಕಾಣುತ್ತೇವೆ. ಇಂತಹ ಗೋ ಮಾತೆಯನ್ನು ಆರೈಕೆ ಮಾಡುತ್ತಾ, ಮುಂದಿನ ಪೀಳಿಗೆಗೆ ಗೋವು ಎಂಬ ಕಲ್ಪವೃಕ್ಷದ ಮಾಹಿತಿಯನ್ನು ಈ ಗೋಧಾಮ ಲೋಕಕ್ಕೆ ತಿಳಿಸುತ್ತಿದೆ. ಅಧ್ಯಯನ ದೃಷ್ಟಿಯಿಂದ ವಿದ್ಯಾರ್ಥಿಗಳು ಗೋಧಾಮಕ್ಕೆ ಭೇಟಿ ನೀಡುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮರಳಿ ಹಳ್ಳಿಗೆ ಬರುವಂತೆ ಆಕರ್ಷಿಸುವಲ್ಲಿ ಗೋಧಾಮದ ಪಾತ್ರ ಮಹತ್ತರ

ಅಧ್ಯಕ್ಷತೆ ವಹಿಸಿದ್ದ ಗೋಧಾಮದ ಸಂಸ್ಥಾಪಕರಾದ ರಾಮಕೃಷ್ಣ ಆಚಾರ್ ಮಾತನಾಡಿ, ನಾವು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ನಮ್ಮ ದೇಶೀ ಸಂಸ್ಕೃತಿ ಮತ್ತು ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ ಆದರೆ ಇಂತಹ ಸಂದರ್ಭದಲ್ಲಿ ಗೋಧಾಮವು ಪ್ರಾಚೀನ ಭಾರತದ ಹಳ್ಳಿಯ ಜೀವನ, ಗೋಸಾಕಾಣಿಕೆ, ಪ್ರಾಣಿ ಪಕ್ಷಿಗಳು, ಕೃಷಿ ಆಧಾರಿತ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಮುಂದಿನ ಜನಾಂಗವು ‘ಮರಳಿ ಹಳ್ಳಿಗೆ’ ಬರುವಂತೆ ಆಕರ್ಷಿಸುವ ಮಹತ್ತರ ಕೆಲಸ ಮಾಡುತ್ತಿದೆ. ಸಾಫ್ಟ್ವೇರ್, ಮೆಡಿಕಲ್, ಇಂಜಿನಿಯರಿಂಗ್ ಅಥವಾ ಯಾವುದೇ ವೃತ್ತಿಪರ ಉದ್ಯೋಗದಷ್ಟೇ ಹೈನುಗಾರಿಕೆಯು ಮೌಲ್ಯಯುತವಾಗಿದೆ ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡುವ ಪ್ರಯತ್ನದಲ್ಲಿ ನಾವು ತೊಡಗಿದ್ದೇವೆ. ನಮ್ಮನ್ನು ಬೆಂಬಲಿಸಿದ ಸರ್ವರಿಗೂ ಋಣಿಯಾಗಿದ್ದೇನೆ ಎಂದು ಹೇಳಿದರು.

ಸನ್ಮಾನ
ಬೋಳ ಸುರೇಂದ್ರ ಕಾಮತ್ ಎಂಡ್ ಸನ್ಸ್‌ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಬೋಳ ದಾಮೋದರ್ ಕಾಮತ್, ಮಂಗಳೂರು ಕ್ಯಾಂಪ್ಕೊ ಲಿಮಿಟೆಡ್‌ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಮಂಗಳೂರಿನ ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ದೇಶಿ ಗೋವಿನ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಾಂತಾರ ಸಿನೆಮಾದ ನಟರಾದ ದೀಪಕ್ ರೈ ಪಾಣಾಜೆ, ಚಂದ್ರಕಲಾ ರಾವ್, ಸತೀಶ್‌ ಆಚಾರ್‌ ಪೆರ್ಡೂರು ಮತ್ತು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರಾಂಕ್‌ ಪಡೆದ ಕುಂಟಾಡಿ ವಿಜಯ ಕುಮಾರ್‌ ಸಹಿತ ಹಲವರನ್ನು ಸನ್ಮಾನಿಸಲಾಯಿತು.

ಗೋಪೂಜೆಯನ್ನು ಉದ್ಯಮಿ ಬಾರ್ಕೂರು ಶ್ರೀನಿವಾಸ ಶೆಟ್ಟಿಗಾರ್ ದಂಪತಿ ನೆರವೇರಿಸಿದರು. ಜಾಗೃತಿ ನಾಯಕ್ ಪ್ರಾರ್ಥಿಸಿ ಗೋಧಾಮದ ಟ್ರಸ್ಟಿ ಸವಿತ ಅರ್ ಅಚಾರ್ ಸ್ವಾಗತಿಸಿದರು. ಪುರೋಹಿತ್‌ ದಾಮೊದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು, ಸುಕುಮಾರ್‌ ಮುನಿಯಾಲ್‌ ಸಹಕರಿಸಿದರು.

Latest Articles

error: Content is protected !!