ಮೊರ್ಬಿ ತೂಗು ಸೇತುವೆ ದುರಂತ : 140 ದಾಟಿದ ಸಾವಿನ ಸಂಖ್ಯೆ

ಯುವಕರು ಸೇತುವೆ ಅಲ್ಲಾಡಿಸಿದ ವೀಡಿಯೊ ವೈರಲ್‌ : ಮಿತಿಗಿಂತ ಹೆಚ್ಚು ಜನರನ್ನುಸೇತುವೆ ಮೇಲೆ ಕಳುಹಿಸಿದ ಆರೋಪ

ಅಹಮದಾಬಾದ್ : ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಸಂಭವಿಸಿದ ಕೇಬಲ್ ಬ್ರಿಜ್‌ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಇನ್ನೂ ಹಲವರು ನದಿಯಲ್ಲಿ ಸಿಲುಕಿರುವ ಅನುಮಾನ ವ್ಯಕ್ತವಾಗಿದ್ದು, ಇವರ ಶೋಧಕಾರ್ಯ ಹಾಗೂ ರಕ್ಷಣಾ ಕಾರ್ಯ ಮುಂದುವರಿದೆ. ಸ್ಥಳದಲ್ಲಿ ಸೇನೆ, ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್​ ಬೀಡುಬಿಟ್ಟಿದೆ.
ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಭಾನುವಾರ ಕುಸಿದು ಬಿದ್ದು ದೊಡ್ಡ ದುರಂತ ಸಂಭವಿಸಿದೆ. ಸೇತುವೆ ಮೇಲಿದ್ದ ಹಲವರು ನದಿಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ ಗುಜರಾತ್ ಸೇತುವೆ ದುರಂತದಲ್ಲಿ ಈವರೆಗೆ ಬಂದ ಮಾಹಿತಿ ಪ್ರಕಾರ 30 ಮಕ್ಕಳು ಸೇರಿದಂತೆ 90 ಜನರು ಸಾವನ್ನಪ್ಪಿದ್ದರು. ಇಷ್ಟರವರೆಗೆ 177 ಮಂದಿಯನ್ನು ರಕ್ಷಿಸಲಾಗಿದೆ. ನದಿಯಲ್ಲಿ ಇನ್ನೂ ಹಲವು ಮಂದಿ ಮುಳುಗಿರುವ ಮತ್ತು ಕೊಚ್ಚಿ ಹೋಗಿರುವ ಸಾಧ್ಯತೆಯಿದ್ದು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೇತುವೆ ಅಲುಗಾಡಿಸಿದ ಯುವಕರು
ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳಲು ಕಾರಣವಾಗಿರುವ ಗುಜರಾತ್‌ ಮೊರ್ಬಿ ಸೇತುವೆ ದುರಂತದ ಬಗ್ಗೆ ಸ್ಥಳೀಯರು, ಪ್ರವಾಸಿಗರು ಇದೊಂದು ಭಯಾನಕ ಘಟನೆ ಎಂದು ಹೇಳಿದ್ದಾರೆ. ಸೇತುವೆ ಮೇಲಿದ್ದ ಗುಂಪಿನ ಕೆಲವು ಯುವಕರು ಸೇತುವೆಯನ್ನು ಉದ್ದೇಶಪೂರ್ವಕವಾಗಿ ಅಲುಗಾಡಿಸಲು ಪ್ರಾರಂಭಿಸಿದ್ದರು ಎಂದು ಅಹಮದಾಬಾದ್ ನಿವಾಸಿ ವಿಜಯ್ ಗೋಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಭಾನುವಾರ ಮಧ್ಯಾಹ್ನ ಗುಜರಾತ್‌ನ ಮೊರ್ಬಿಯಲ್ಲಿರುವ ತೂಗು ಸೇತುವೆಗೆ ಭೇಟಿ ನೀಡಿದ್ದ ವಿಜಯ್ ಗೋಸ್ವಾಮಿ ಮತ್ತು ಕುಟುಂಬದವರು, ಯುವಕರ ಗುಂಪು ಸೇತುವೆ ಅಲುಗಾಡಿಸಲು ಪ್ರಾರಂಭಿಸಿದ ನಂತರ ಭಯದಿಂದ ಸೇತುವೆಯ ಅರ್ಧದಾರಿಯಲ್ಲೇ ಹಿಂತಿರುಗಿದ್ದಾರೆ. ಇವರು ಹಿಂತಿರುಗಿದ ಕೆಲವು ಗಂಟೆಗಳ ನಂತರ, ಪ್ರವಾಸಿಗರ ಆಕರ್ಷಣೆಯಾದ ಮಚ್ಚು ನದಿಯ ಸೇತುವೆಯು ಕುಸಿದಿದೆ.ಯುವಕರು ಸೇತುವೆ ಅಲುಗಾಡಿಸುತ್ತಿರುವ ವೀಡಿಯೊ ತುಣುಕುಗಳು ಈಗ ವೈರಲ್‌ ಆಗಿವೆ.
ಬ್ರಿಟಿಷರ ಕಾಲದ ಸೇತುವೆ
ಬ್ರಿಟಿಷರ ಕಾಲದ ಸೇತುವೆಯನ್ನು ಏಳು ತಿಂಗಳ ಕಾಲ ಮುಚ್ಚಿ ನವೀಕರಣ ಮಾಡಲಾಗಿತ್ತು. ಐದು ದಿನಗಳ ಹಿಂದಷ್ಟೇ ಸಾರ್ವಜನಿಕರಿಗಾಗಿ ಮತ್ತೆ ತೆರೆಯಲಾಗಿತ್ತು. ದೀಪಾವಳಿ ರಜೆ ಮತ್ತು ಛಠ್‌ ಪೂಜೆಯ ಕಾರಣ ಸೇತುವೆಯ ಮೇಲೆ ಭಾರಿ ಜನ ಸಂದಣಿಯಿತ್ತು. ದೀಪಾವಳಿ ರಜೆ ಕಾರಣ ಕುಟುಂಬದೊಂದಿಗೆ ಮೊರ್ಬಿಗೆ ಹೋಗಿದ್ದಾಗಿ ವಿಜಯ್ ಗೋಸ್ವಾಮಿ ಹೇಳಿದ್ದಾರೆ.
ಸೇತುವೆಯ ಮೇಲೆ ಭಾರಿ ಜನಸಂದಣಿ ಇತ್ತು. ಕೆಲವು ಯುವಕರು ಉದ್ದೇಶಪೂರ್ವಕವಾಗಿ ಸೇತುವೆಯನ್ನು ಅಲುಗಾಡಿಸಲು ಪ್ರಾರಂಭಿಸಿದಾಗ ನನ್ನ ಕುಟುಂಬ ಮತ್ತು ನಾನು ಸೇತುವೆಯ ಮೇಲೆ ಇದ್ದೆವು. ಜನರು ಯಾವುದೇ ಆಧಾರವಿಲ್ಲದೆ ನಿಲ್ಲುವುದು ಅಸಾಧ್ಯವಾಗಿತ್ತು. ಇದು ಅಪಾಯಕಾರಿ ಎಂದು ನಾನು ಭಾವಿಸಿ, ಸೇತುವೆಯ ಮೇಲೆ ಸ್ವಲ್ಪ ದೂರ ಕ್ರಮಿಸಿದ ನಂತರ ನಾವು ಹಿಂತಿರುಗಿದೆವು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸೇತುವೆ ಅಲುಗಾಡಿಸುವ, ಹಗ್ಗಗಳಿಗೆ ಒದೆಯುವ ಯುವಕರ ವಿಡಿಯೋ ವೈರಲ್ ಆಗಿದೆ.
ಸ್ಥಳದಿಂದ ಹೊರಡುವ ಮೊದಲು, ಸೇತುವೆ ಅಲುಗಾಡಿಸುವುದನ್ನು ತಡೆಯಲು ನಾನು ಕರ್ತವ್ಯ ನಿರತ ಸಿಬ್ಬಂದಿಯನ್ನು ಎಚ್ಚರಿಸಿದೆ. ಆದರೆ, ಅವರು ಟಿಕೆಟ್ ಮಾರಾಟದಲ್ಲಿ ಮಾತ್ರ ಆಸಕ್ತಿ ಹೊಂದಿದ್ದರು. ಸೇತುವೆ ಬಳಿ ಜನಸಂದಣಿಯನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲ. ನಾವು ವಾಪಸ್ ಹೋದ ಕೆಲವು ಗಂಟೆಗಳ ನಂತರ, ನಮ್ಮ ಭಯ ನಿಜವಾಯಿತು ಎಂದು ವಿಜಯ್ ಗೋಸ್ವಾಮಿ ದುಃಖ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ಕೆಲವು ಯುವಕರು ಸೇತುವೆಯ ಹಗ್ಗಗಳನ್ನು ಒದೆಯುವುದು, ಇತರ ಪ್ರವಾಸಿಗರನ್ನು ಹೆದರಿಸಲು ಸೇತುವೆಯನ್ನು ಜೋರಾಗಿ ಅಲ್ಲಾಡಿಸುವುದನ್ನು ಕಾಣಬಹುದು. ‘ಸಾಧ್ಯವಾದಷ್ಟು ಜನರನ್ನು ಉಳಿಸಲು ಪ್ರಯತ್ನಿಸಿದ್ದೇವೆ’ ಕ್ಷಣಾರ್ಧದಲ್ಲಿ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದೀಪಾವಳಿ ರಜೆಯ ಕಾರಣ ಅನೇಕ ಜನರು ಬಂದಿದ್ದರಿಂದ ಅಪಘಾತದ ಸಮಯದಲ್ಲಿ ಸೇತುವೆಯು ತುಂಬಿ ತುಳುಕುತ್ತಿತ್ತು ಎಂದು ಸೇತುವೆಯ ಪಕ್ಕದಲ್ಲೇ ವಾಸವಾಗಿರುವ ಸುಪ್ರಾನ್ ಹೇಳಿದ್ದಾರೆ.
ಕೇಬಲ್‌ಗಳು ಮುರಿದುಹೋದವು. ಸೇತುವೆಯು ಒಂದು ಸೆಕೆಂಡ್‌ನಲ್ಲಿ ಕುಸಿದುಬಿತ್ತು. ಜನರು ಪರಸ್ಪರ ಒಬ್ಬರ ಮೇಲೊಬ್ಬರು ಬಿದ್ದರು. ಹಲವು ಮಂದಿ ನೇರ ನದಿಗೆ ಬಿದ್ದರು. ಕೆಲವರು ಸೇತುವೆಯ ಸೈಡ್ ಬಾರ್‌ಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು ಎಂದಿದ್ದಾರೆ.error: Content is protected !!
Scroll to Top