ನಿವೇಶನ ಖರೀದಿಗಾಗಿ ಸ್ನೇಹಿತನಿಂದ ಪಡೆದ ಸಾಲ

ಹುದ್ದೆಗಾಗಿ ಲಂಚ ಆರೋಪಕ್ಕೆ ಸಿದ್ದರಾಮಯ್ಯ ಸ್ಪಷ್ಟೀಕರಣ

ಬೆಂಗಳೂರು: ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಆದರೆ, ಸಾಲ ಪಡೆಯುವುದು ಅಪರಾಧನಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಆರೋಪ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿವೇಕ್ ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಅವರಿಂದ ಸಾಲ ಪಡೆದದ್ದಕ್ಕೂ ಅವರ ನೇಮಕಕ್ಕೂ ಸಂಬಂಧ ಇಲ್ಲ. ಇದನ್ನೂ ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು ಸಿಎಂ ಬಸವರಾಜ ಬೊಮ್ಮಾಯಿ ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ ಎಂದರು.
ಉತ್ತರ ಕನ್ನಡದಲ್ಲಿ ಪರೇಶ್‌ ಮೇಸ್ತಾ ಸಾವಿಗೀಡಾದಾಗ ಬಿಜೆಪಿಯವರ ಒತ್ತಡಕ್ಕಾಗಿ ತಕ್ಷಣ ಪ್ರಕರಣವನ್ನು ಸಿಬಿಐಗೆ ವಹಿಸಿದ್ದೆ. ಈಗ ಸಿಬಿಐ ಬಿ ರಿಪೋರ್ಟ್‌ ನೀಡಿದರೆ ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯ ನಾಶ ಮಾಡಿದ್ದು ಕಾರಣ ಎಂದು ಹೇಳುತ್ತಿರುವುದು ನಾಚಿಕೆಗೇಡು. ಸಿಬಿಐ ಸಂಸ್ಥೆ ಗೃಹ ಸಚಿವ ಅಮಿತ್ ಶಾ ಅವರ ಅಧೀನದಲ್ಲಿದ್ದು, ಪ್ರಕರಣದ ಸಾಕ್ಷಿ ನಾಶ ಆಗಿ, ಸರಿಯಾದ ರೀತಿ ತನಿಖೆ ಆಗಿಲ್ಲ ಎಂದರೆ ಅಮಿತ್‌ ಶಾ ಅವರು ಅಸಮರ್ಥರು ಎಂದಲ್ವ? ಈಗ ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕನನ್ನೇ ದೂರಿದಂಗೆ ಆಗಲ್ವಾ? ಎಂದು ಹೇಳಿದರು.
ಸಿಬಿಐ ಬಿ ರಿಪೋರ್ಟ್‌ ಹಾಕಿದ್ರೆ ಸಾಕ್ಷ್ಯ ನಾಶ ಮಾಡಿದ್ರು ಎನ್ನುತ್ತಾರೆ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್‌ ಹಾಕಿದರೆ ಕ್ಲೀನ್‌ ಚಿಟ್‌ ಕೊಟ್ಟಿದ್ದಾರೆ ಎನ್ನುತ್ತಾರೆ. ಬಿಜೆಪಿಯವರಿಗೆ ಎಷ್ಟು ನಾಲಿಗೆಗಳು ಎಂದು ಅವರು ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬೀಳಲು ಸಾಧ್ಯ. ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅವುಗಳನ್ನೂ ಸೇರಿಸಿ ತನಿಖೆ ಮಾಡಿಸಿದರೆ ಅಭ್ಯಂತರ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.





























































































































































































































error: Content is protected !!
Scroll to Top