ಮುಖ್ಯಮಂತ್ರಿಯಾಗಿದ್ದಾಗ 1.30 ಕೋ.ರೂ. ಪಡೆದು ನೌಕರಿ ಕೊಟ್ಟಿರುವ ಪ್ರಕರಣ
ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲಂಚ ಪಡೆದು ಹುದ್ದೆ ನೀಡಿದ್ದಾರೆ ಎಂದು ಬಿಜೆಪಿ ನೇರ ಆರೋಪ ಮಾಡಿದೆ. ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್. ಆರ್. ಅವರು ಚೆಕ್ ಮೂಲಕ 1.30 ಕೋ.ರೂ. ಪಡೆದುಕೊಂಡು ವಿವೇಕಾನಂದ ಎಂಬವರಿಗೆ ಸಿದ್ದರಾಮಯ್ಯ ಪ್ರಭಾವಿ ಹುದ್ದೆಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಿಂಗ್ಸ್ ಕೋರ್ಟ್ ವಿವೇಕ್ ಎಂದು ಪರಿಚಿತರಾಗಿರುವ ಎಲ್. ವಿವೇಕಾನಂದ ಎಂಬವರು 2014ರ ಜು.28ರಂದು ಸಿದ್ದರಾಮಯ್ಯನವರಿಗೆ 1.30 ಕೊ.ರೂ.ಯ ಚೆಕ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸರಕಾರ ಅವರನ್ನು ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಉಸ್ತುವಾರಿ ಹುದ್ದೆಗೆ ನೇಮಿಸಿದೆ. ನಂತರ ಕಾರ್ಯಕಾರಿ ಹುದ್ದೆಗೂ ಈ ವಿವೇಕಾನಂದ ನೇಮಕಗೊಂಡಿದ್ದಾರೆ.
ಇದನ್ನು ಸಾಲ ಎಂಬುದಾಗಿ ಲೋಕಾಯುಕ್ತ ಮತ್ತು ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಓರ್ವ ಮುಖ್ಯಮಂತ್ರಿ ವ್ಯಕ್ತಿಯೊಬ್ಬರಿಂದ ಬರೀ 1.30 ಕೋ.ರೂ. ಸಾಲ ಪಡೆದಿದ್ದಾರೆ ಎಂಬುದನ್ನು ನಂಬಲು ಸಾಧ್ಯವೇ? ಇದು ಯಾವ ಉದ್ದೇಶಕ್ಕಾಗಿ ಪಡೆದ ಮೊತ್ತ ಎಂಬುದನ್ನು ಸಿದ್ದರಾಮಯ್ಯ ಸಲ್ಲೂ ಹೇಳಿಕೊಂಡಿಲ್ಲ. ಮುಖ್ಯಮಂತ್ರಿ ಅಥವಾ ಅಧಿಕಾರ ಸ್ಥಾನದಲ್ಲಿರುವವರು ಹುದ್ದೆ ನೀಡಿ ಫಲಾನುಭವಿಯಿಂದ ಉಡುಗೊರೆ, ನಗದು ಅಥವಾ ಇನ್ಯಾವುದೇ ರೂಪದ ಪ್ರತಿಫಲವನ್ನು ಪಡೆದುಕೊಳ್ಳುವುದು ಕೂಡ ಭ್ರಷ್ಟಾಚಾರವಾಗುತ್ತದೆ. ಈ ಕುರಿತು ಸಿದ್ದರಾಮಯ್ಯನವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ದೂರು ದಾಖಲಿಸುತ್ತೇವೆ ಎಂದು ರಮೇಶ್ ಎನ್.ಆರ್.ತಿಳಿಸಿದ್ದಾರೆ.