Thursday, December 1, 2022
spot_img
Homeರಾಜ್ಯಒಬಿಸಿ ಪಟ್ಟಿಯಿಂದ ತಳವಾರ ಮತ್ತು ಪರಿವಾರ ಸಮುದಾಯವನ್ನು ತೆಗೆದು ಹಾಕಿದ ರಾಜ್ಯ ಸರಕಾರ

ಒಬಿಸಿ ಪಟ್ಟಿಯಿಂದ ತಳವಾರ ಮತ್ತು ಪರಿವಾರ ಸಮುದಾಯವನ್ನು ತೆಗೆದು ಹಾಕಿದ ರಾಜ್ಯ ಸರಕಾರ

ಬೆಂಗಳೂರು: ತಳವಾರ ಹಾಗೂ ಪರಿವಾರ ಸಮುದಾಯಗಳನ್ನು ಒಬಿಸಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪರಿಶಿಷ್ಟ ಪಂಗಡ ಮೀಸಲಾತಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಒಬಿಸಿಯಿಂದ ತಳವಾರ ಮತ್ತು ಪರಿವಾರ ಸಮುದಾಯವನ್ನು ಕೈಬಿಡಲಾಗಿದೆ. ಈ ಕುರಿತು ಕರ್ನಾಟಕ ಸರ್ಕಾರ ಅ. 29 ಅಧಿಕೃತ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ 2020ರ ಮಾ.19ರಂದು ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ರಾಜ್ಯಪತ್ರ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಗೊಂದಲಗಳು ಸೃಷ್ಟಿಯಾಗಿದ್ದವು. ರಾಜ್ಯ ಸರ್ಕಾರ ಕಳೆದ ಜೂನ್‌ನಲ್ಲಿ ಹೊರಡಿಸಿದ ಸುತ್ತೋಲೆ ಹಾಗೂ ಆಗಸ್ಟ್‌ನಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಪರಿಶಿಷ್ಟ ಪಂಗಡದ ಪರಿವಾರ ಹಾಗೂ ತಳವಾರ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿತ್ತು. ಆದರೂ ಈ ವರ್ಗಗಳಿಗೆ ಸೇರಿದ ವ್ಯಕ್ತಿಗಳು ಜಾತಿ ಪ್ರಮಾಣ ಪತ್ರ ಪಡೆಯಲು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಸ್ಪಷ್ಟನೆ ನೀಡಿತ್ತು. ನಿಯಾಮನುಸಾರ ನೈಜವಾದ ಪರಿಶಿಷ್ಟ ಪಂಗಡದ ಜಾತಿಗೆ ಸೇರಿದ ಪರಿವಾರ ಹಾಗೂ ತಳವಾರ ಜಾತಿ ವ್ಯಕ್ತಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ನಿಗದಿತ ಅವಧಿಯೊಳಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here

Most Popular

error: Content is protected !!