ಕಾರ್ಕಳ : ಕಾರೊಂದು ಓವರ್ ಟೇಕ್ ಭರಾಟೆಯಲ್ಲಿ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಜಾರ್ಜ್ ಡಿಸೋಜಾ ರವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿನ ಬೆಳ್ಮಣ್ ನೀರ್ಚಾಲು ಎಂಬಲ್ಲಿ ಅ. 28ರಂದು ಮಧ್ಯಾಹ್ನ ನಡೆದಿದೆ.
ಬೆಳ್ಮಣ್ ಕಡೆಯಿಂದ ಪಡುಬಿದ್ರೆ ಕಡೆಗೆ ಜಾರ್ಜ ಡಿಸೋಜಾ (74) ರವರು ತನ್ನ ಬೈಕನ್ನು ಚಲಾಯಿಸಿಕೊಂಡು ಹೋಗಿ ಪೆಲತಕಟ್ಟೆ ಕ್ರಾಸ್ ಗೆ ತಿರುಗಿಸುವ ಬಗ್ಗೆ ತನ್ನ ಬೈಕ್ ನ ಬಲಗಡೆಯ ಇಂಡಿಕೇಟರ್ ಹಾಕಿ ಬೈಕ್ ನ್ನು ಬಲಕ್ಕೆ ತಿರುಗಿಸುತ್ತಿರುವಾಗ ಬೆಳ್ಮಣ್ ಕಡೆಯಿಂದ ಪಡುಬಿದ್ರೆ ಕಡೆಗೆ ಚಲಿಸುತಿದ್ದ ಕಾರಿನ ಚಾಲಕ ಮಹಮ್ಮದ್ ಸಮಸ್ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ತನ್ನ ಮುಂದಿನಿಂದ ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿ ಒಮ್ಮೆಲೆ ಜಾರ್ಜ ಡಿಸೋಜಾರವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಯ ಹಿಂಭಾಗ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.