40ನೇ ದಿನ ಶ್ರದ್ಧಾಂಜಲಿ ಅರ್ಪಿಸಲು ಸೇರಿದ ಸಾವಿರಾರು ಜನ
ಟೆಹ್ರಾನ್ : ಲಾಕಪ್ನಲ್ಲಿ ಪೊಲೀಸರ ಹಿಂಸೆಯಿಂದ ಸಾವಿಗೀಡಾದ ಮೆಹ್ಸಾ ಅಮಿನಿಯ (22) ಸೂತಕ ಮುಗಿಯುವ 40ನೇ ದಿನವಾದ ಬುಧವಾರ ಮತ್ತೊಮ್ಮೆ ಪ್ರತಿಭಟನೆ ಭುಗಿಲೆದ್ದಿದೆ. ಅಮಿನಿಯ ಹುಟ್ಟೂರಾದ ಪಶ್ಚಿಮ ಕುರ್ದಿಸ್ಥಾನದ ಸಕೇಜ್ನಲ್ಲಿವರು ಆಕೆಯ ಗೋರಿಗೆ ಅಣತಿಮ ನಮನ ಸಲ್ಲಿಸುವ ಸಲುವಾಗಿ ಸಾವಿರಾರು ಜನು ಆಗಮಿಸಿದ್ದರು. ಅವರನ್ನು ನಿಯಂತ್ರಿಸಲು ಭದ್ರತಾ ಪಡೆ ಪ್ರಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದಿದೆ. ನೂರಾರು ಯುವತಿಯರು ತಮ್ಮ ಶಿರವಸ್ತ್ರವನ್ನು ಸುತ್ತು ಜಡೆ ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಅಮಿನಿಯ ಹುಟ್ಟೂರಿಗೆ ತಿರುಗುವ ಸಕೇಜ್ನ ಝಿಂದಾನ್ ವೃತ್ತದಿಂದಲೆ ಕಾರುಗಳ ಸಾಲು ಶುರುವಾಗಿತ್ತು. ಮಹಿಳೆಯರು ಬಹುಸಂಖ್ಯೆಯಲ್ಲಿ ಆಗಮಿಸಿ ಸರಕಾರದ ವಿರುದ್ಧ ಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರಿಯಾಗಿ ಶಿರವಸ್ತ್ರ ಧರಿಸಿಲ್ಲ ಎಂಬ ಆರೋಪದಲ್ಲಿ ಅಮಿನಿಯನ್ನು ಪೊಲೀಸರು ಸೆ.16ರಂದು ಬಂಧಿಸಿದ್ದರು. ಅದರ ಮರುದಿನ ಆಕೆ ಶವವಾಗಿ ಪತ್ತೆಯಾಗಿದ್ದಳು. ಲಾಕಪ್ನಲ್ಲಿ ಪೊಲೀಸರು ನೀಡಿದ ಹಿಂಸೆಯಿಂದ ಅವಳು ಸಾವಿಗೀಡಾಗಿದ್ದಳು. ಅನಂತರ ಇರಾನ್ ಮಹಿಳೆಯರು ಹಿಜಾಬ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇರಾನ್ ಧಾರ್ಮಿಕ ಸಂಪ್ರದಾಯದ ಪ್ರಕಾರ 40ನೇ ದಿನ ಸೂತಕ ಮುಕ್ತಾಯವಾಗುತ್ತಿದೆ. ಅಂದು ಅಗಲಿದವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕ್ರಮವಿದೆ. ಅದಕ್ಕಾಗಿ ಸಾವರಾರು ಜನರು ಅಮಿನಿಯ ಗೋರಿಯ ಬಳಿಗೆ ಬಂದಿದ್ದರು.
ಪೊಲೀಸರು ನಿರ್ಬಂಧಿಸಿದಷ್ಟು ಜನಸಾಗರ ಹರಿದು ಬರಿತ್ತಲೇ ಇತ್ತು. ಪೊಲೀಸರು ಹಲವು ಸುತ್ತು ಅಶ್ರುವಾಯು ಸಿಡಿಸಿ ಲಾಠಿಚಾರ್ಜ್ ಮಾಡಿದ್ದಾರೆ.