ಮೃತಪಟ್ಟ ಮಗನ ಆಸ್ತಿಯಲ್ಲಿ ವಿಧವೆ ತಾಯಿಗೆ ಸಮಾನ ಪಾಲು; ಹೈಕೋರ್ಟ್​ ಮಹತ್ವದ ಆದೇಶ

ಬೆಂಗಳೂರು: ಗಂಡನ ನಿಧನದ ನಂತರ ಮಹಿಳೆ ತನ್ನ ಗಂಡನ ಆಸ್ತಿಯನ್ನು ಪಾಲು ಮಾಡಿದ ನಂತರ ಒಂದುವೇಳೆ ತನ್ನ ಗಂಡುಮಕ್ಕಳಲ್ಲಿ ಯಾರಾದರೂ ಸಾವನ್ನಪ್ಪಿದರೆ ಆ ಮಗನ ಆಸ್ತಿಯಲ್ಲಿ ಆ ತಾಯಿ ಕೂಡ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂಬ ಮಹತ್ವದ ಆದೇಶವನ್ನು ಕರ್ನಾಟಕ ಹೈಕೋರ್ಟ್​ ನೀಡಿದೆ. ಮಹಿಳೆಗೆ ತನ್ನ ಮೃತ ಗಂಡನ ಆಸ್ತಿಯಲ್ಲಿ ಮಾತ್ರವಲ್ಲ, ಮೃತ ಮಗನ ಆಸ್ತಿಯಲ್ಲೂ ಸಮಾನ ಪಾಲು ಪಡೆಯಲು ಅಧಿಕಾರವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಧವೆ ತಾಯಿಗೆ ಮಾತ್ರ ಈ ಆದೇಶ ಅನ್ವಯ
ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಸೆಕ್ಷನ್ 8ರ ಅನುಸಾರ, ಪಿತ್ರಾರ್ಜಿತವಾಗಿ ಮೃತ ಮಗನಿಗೆ ಬಂದಿರುವ ಆಸ್ತಿ ಆತನ ಪತ್ನಿ ಹಾಗೂ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಅದರ ಜೊತೆಗೆ, ಆತನ ವಿಧವೆ ತಾಯಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಈ ನಿಯಮ ವಿಧವೆ ತಾಯಂದಿರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಬೀದರ್​ನ ಹನುಮಂತ ರೆಡ್ಡಿ ಹಾಗೂ ಈರಮ್ಮ ಎಂಬ ದಂಪತಿ ಹಾಗೂ ಮಕ್ಕಳ ನಡುವಿನ ಆಸ್ತಿ ಹಂಚಿಕೆ ಪ್ರಕರಣವೊಂದರಲ್ಲಿ ಹೈಕೋರ್ಟ್​ ನೀಡಿರುವ ತೀರ್ಪು ಇದಾಗಿದೆ. ಹನುಮಂತ ರೆಡ್ಡಿ ಹಾಗೂ ಈರಮ್ಮ ದಂಪತಿಗೆ ಪೊರಸ ರೆಡ್ಡಿ, ಭೀಮ ರೆಡ್ಡಿ, ರೇವಮ್ಮ ಹಾಗೂ ಬಸವ ರೆಡ್ಡಿ ಎಂಬ 4 ಮಕ್ಕಳಿದ್ದು, ಇವರಲ್ಲಿ ಭೀಮ ರೆಡ್ಡಿ ಎಂಬಾತ ಮೃತಪಟ್ಟಿದ್ದಾರೆ. ಈರಮ್ಮನ ಪತಿ ಹನುಮಂತ ರೆಡ್ಡಿಯೂ ಮೃತಪಟ್ಟಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ತಾಯಿ, ಮಕ್ಕಳ ನಡುವೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಈ ವಿಚಾರ ಬೀದರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಅಲ್ಲಿ ಬಂದ ತೀರ್ಪು ಸಮಾಧಾನ ತರದ ಹಿನ್ನೆಲೆಯಲ್ಲಿ ಈರಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದಲ್ಲಿ ಮೂರು ಹಂತದಲ್ಲಿ ಉತ್ತರಾಧಿಕಾರ ಕಾಯ್ದೆ ಪ್ರಕಾರ ಆಸ್ತಿ ಹಂಚಿಕೆ ಮಾಡಬೇಕಿದೆ ಎಂದು ಹೈಕೋರ್ಟ್‌ ಹೇಳಿದೆ. ಮೊದಲ ಹಂತದಲ್ಲಿ ಹನುಮಂತರೆಡ್ಡಿ ಅವರ ಆಸ್ತಿಯನ್ನು ಹನುಮಂತರೆಡ್ಡಿ, ಹಾಗೂ ಅವರ ನಾಲ್ಕು ಮಕ್ಕಳು ಸೇರಿ 5 ಪಾಲು ಮಾಡಬೇಕು. ಎರಡನೇ ಹಂತದಲ್ಲಿ ಹನುಮಂತರೆಡ್ಡಿ ಅವರಿಗೆ ಬಂದಿರುವ ಆಸ್ತಿಯಲ್ಲಿ ಆತನ ಪತ್ನಿ ಈರಮ್ಮ ಮತ್ತು ಮಕ್ಕಳಿಗೆ ಸಮಾನವಾಗಿ ಪಾಲು ಮಾಡಬೇಕು. ಮೂರನೇ ಹಂತದಲ್ಲಿ ಆಸ್ತಿ ಹಂಚಿಕೆ ಮಾಡುವಾಗ ಮೃತಪಟ್ಟ ಭೀಮರೆಡ್ಡಿಗೆ ಬಂದಿರುವ ಆಸ್ತಿಯಲ್ಲಿ ಭೀಮರೆಡ್ಡಿ, ಪತ್ನಿ, ಪುತ್ರಿ ಹಾಗೂ ತಾಯಿ ವಿಧವೆ ಈರಮ್ಮನವರಿಗೆ ಸಮಾನ ಹಂಚಿಕೆಯಾಗಬೇಕು. ಆಗ ತನ್ನ ಪತಿಯ ಪಾಲಿಗೆ ಬಂದ ಆಸ್ತಿಯಿಂದ ಬಂದಿರುವ ಭಾಗಶಃ ಆಸ್ತಿ ಮತ್ತು ಭೀಮರೆಡ್ಡಿ, ಪಾಲಿಗೆ ಬಂದಿರುವ ಆಸ್ತಿಯಲ್ಲಿನ ಭಾಗ ಸೇರಿ ವಿಧವೆ ತಾಯಿಗೆ ಆಸ್ತಿ ಹಂಚಿಕೆಯಾಗಬೇಕು ಎಂದು ಹೈಕೋರ್ಟ್‌ ತಿಳಿಸಿದೆ.

Latest Articles

error: Content is protected !!