Tuesday, December 6, 2022
spot_img
Homeಸುದ್ದಿಶಾಸಕರನ್ನು ಖರೀದಿಸಲು ಬಂದವರು ನೋಟಿನ ಮೂಟೆ ಸಹಿತ ಸೆರೆ

ಶಾಸಕರನ್ನು ಖರೀದಿಸಲು ಬಂದವರು ನೋಟಿನ ಮೂಟೆ ಸಹಿತ ಸೆರೆ

ತೆಲಂಗಾಣದ ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಖರೀದಿಸುವ ಯತ್ನ ಆರೋಪ

ಹೈದರಾಬಾದ್: ತೆಲಂಗಾಣದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ (ಟಿಆರ್‌ಎಸ್) ನಾಲ್ವರು ಶಾಸಕರನ್ನು ಖರೀದಿಸಲು ಯತ್ನಿಸಿದ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಟಿಆರ್‌ಎಸ್ ಶಾಸಕರಿಗೆ ಪಕ್ಷಾಂತರ ಮಾಡುವುದಕ್ಕಾಗಿ ದೆಹಲಿಯ ಒಂದಷ್ಟು ಮಂದಿ ಹಲವು ಆಮಿಷಗಳನ್ನೊಡ್ಡಿದ್ದರು. ಇದರ ಯತ್ನದ ಭಾಗವಾಗಿ ಹೈದರಾಬಾದ್‌ನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ನೋಟುಗಳ ಕಂತೆಗಳ ಸಮೇತ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ದೆಹಲಿ, ತಿರುಪತಿ ಮತ್ತು ಹೈದರಾಬಾದ್ ಮೂಲದ ಏಜೆಂಟ್‌ಗಳೆಂದು ಗುರುತಿಸಲಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳ ಕಂತೆಗಳೊಂದಿಗೆ ವಶಕ್ಕೆ ಪಡೆಯಲಾಗಿದೆ.
ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್​ ನೇತೃತ್ವದ ಟಿಆರ್​ಎಸ್​ ಪಕ್ಷದ ಶಾಸಕರ ಕುದುರೆ ವ್ಯಾಪಾರದ ಯತ್ನದ ಸಂಬಂಧ ಹೈದರಾಬಾದ್​ನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ನಾಲ್ವರನ್ನು ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ.
ಸೈಬರಾಬಾದ್ ಪೊಲೀಸರು ರಂಗಾ ರೆಡ್ಡಿ ಎಂಬವರ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ವ್ಯಕ್ತಿಗಳು ಹಣ, ಗುತ್ತಿಗೆ ಹಾಗೂ ಪದವಿಯನ್ನು ನೀಡುವುದಾಗಿ ಆಮಿಷವೊಡ್ಡುತ್ತಿದ್ದಾರೆ ಎಂಬ ಮಾಹಿತಿ ಟಿಆರ್‌ಎಸ್ ಶಾಸಕರಿಂದ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದಲ್ಲಿ ನಾವು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದಾಗ ಅಲ್ಲಿ ಮೂವರು ಹಣದ ಸಮೇತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಸ್ಟೀಫನ್ ರವೀಂದ್ರ ಹೇಳಿದ್ದಾರೆ.
ಜಿ. ಬಾಲರಾಜು, ಬಿ. ಹರ್ಷವರ್ಧನ್ ರೆಡ್ಡಿ, ಆರ್. ಕಾಂತಾ ರಾವ್ ಹಾಗೂ ರೋಹಿತ್ ರೆಡ್ಡಿ ಎಂಬ ಶಾಸಕರಿಗೆ ಪಕ್ಷಾಂತರ ಮಾಡುವುದಕ್ಕೆ ಆಮಿಷವೊಡ್ಡಲಾಗಿತ್ತು. ಯಾವ ಪಕ್ಷಕ್ಕೆ ಶಾಸಕರನ್ನು ಪಕ್ಷಾಂತರ ಮಾಡಲು ಆಮಿಷವೊಡ್ಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಈ ಘಟನೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸರ್ಕಾರದ ವಿಪ್ ಬಲ್ಕಾ ಸುಮನ್, ಟಿಆರ್‌ಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!