ವಿಶ್ವವಿಖ್ಯಾತ ದೇಗುಲದ ಗೋಡೆಗಳಿಗೆ ಚಿನ್ನದ ಹಾಳೆಯ ಹೊದಿಕೆ
ಕೇದಾರನಾಥ : ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಒಳಗಿನ ಗೋಡೆಗಳನ್ನು ಚಿನ್ನದಿಂದ ನಿರ್ಮಿಸಲಾಗುತ್ತಿದೆ.
ಐಐಟಿ ರೂರ್ಕಿಯ ಇಂಜಿನಿಯರ್‌ಗಳ ಜತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಇಬ್ಬರು ಅಧಿಕಾರಿಗಳು ಗರ್ಭಗುಡಿ ಗೋಡೆಗಳನ್ನು ಚಿನ್ನದ ಹಾಳೆಗಳಿಂದ ಮುಚ್ಚುವ ಕಾರ್ಯದ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಗೋಡೆಗಳ ಹೊರತಾಗಿ, ಜಲೇರಿ (ಶಿವಲಿಂಗಕ್ಕೆ ಹೋಗುವ ಸಣ್ಣ ಕಾರಿಡಾರ್) ಮತ್ತು ಸೀಲಿಂಗ್ ಸೇರಿದಂತೆ ಗರ್ಭಗುಡಿಯು 230 ಕೆಜಿ ತೂಕದ 550 ಪದರಗಳ ಚಿನ್ನದ ಹಾಳೆಯಿಂದ ಅಲಂಕೃತಗೊಳ್ಳಲಿದೆ. ಕಾಮಗಾರಿಯ ಒಂದು ಭಾಗವು ಬುಧವಾರ ಪೂರ್ಣಗೊಂಡಿದೆ ಎಂದು ಬದರಿ ಕೇದಾರ ದೇವಾಲಯ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ತಜ್ಞರ ಸಮ್ಮುಖದಲ್ಲಿ ಕಳೆದ ಮೂರು ದಿನಗಳಿಂದ 19 ಕಾರ್ಮಿಕರು ಚಿನ್ನದ ಹಾಳೆ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಉತ್ತರಾಖಂಡ ರಾಜ್ಯದ ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಒಳಗಿನ ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪಿಸಲು ಮುಂಬೈ ಉದ್ಯಮಿಯೊಬ್ಬರು 230 ಕೆಜಿ ಚಿನ್ನ ಅರ್ಪಿಸಿದ್ದಾರೆ. ಈ ಹಾಳೆಗಳಲ್ಲಿ ಶಿವ, ಹಾವು , ನಂದಿ, ಡಮರುಗ, ತ್ರಿಶೂಲದ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ಈ ಹಿಂದೆ ದೇವಾಲಯದ ಗರ್ಭ ಗುಡಿಯ ಗೋಡೆಗಳಿಗೆ ಬೆಳ್ಳಿಯ ಹಾಳೆಗಳನ್ನು ಅಳವಡಿಸಲಾಗಿತ್ತು. ಈ ಹಾಳೆಗಳನ್ನು ತೆಗೆದು ಬಂಗಾರದ ಹಾಳೆಗನ್ನು ಜೋಡಿಸಲಾಗಿದೆ. ಈ ಕೆಲಸಕ್ಕೆ ಉತ್ತರಖಂಡ ಸರ್ಕಾರ ಅನುಮತಿ ನೀಡಿದೆ. ಆದರೆ ಈ ನಡುವೆ ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪನ ಮಾಡಬಾರದು ಎಂದು ಸ್ಥಳೀಯ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಚಿನ್ನದ ಹಾಳೆಗಳನ್ನು ಒಂದು ವಾರದ ಹಿಂದೆ ದೆಹಲಿಯಿಂದ ವಿಶೇಷ ವಾಹನದಲ್ಲಿ ತರಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಗರ್ಭಗುಡಿಯನ್ನು ಚಿನ್ನದ ಲೇಪಿತ ಹಾಳೆಗಳಿಂದ ಮುಚ್ಚಲು ಬೆಳ್ಳಿಯ ಪದರಗಳನ್ನು ತೆಗೆದುಹಾಕಲಾಯಿತು.