ಕಾನೂನು ಕಣಜ : ನಾಗರಿಕರ ಹಕ್ಕು ಸಂರಕ್ಷಣೆ ಬಗ್ಗೆ ಪೋಲೀಸರ ಕರ್ತವ್ಯ ಮತ್ತು ಜವಾಬ್ದಾರಿ

ಪೊಲೀಸ್ ಆಡಳಿತದಲ್ಲಿ ಪಾರದರ್ಶಕತೆಯನ್ನು ಸಾಧಿಸುವ ಉದ್ದೇಶದಿಂದ ಪೋಲೀಸ್ ಇಲಾಖೆಯು ಕರ್ನಾಟಕ ಪೊಲೀಸರ ಕರ್ತವ್ಯದ ಬಗ್ಗೆ ನಾಗರಿಕ ಸನ್ನದನ್ನು ಹೊರಡಿಸಿದ್ದು ಇದರಲ್ಲಿ ನಾಗರಿಕರ ಹಕ್ಕು ಸಂರಕ್ಷಣೆ ಬಗ್ಗೆ ಪೋಲೀಸರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ವಿವರಿಸಿದ್ದು ಅವುಗಳ ಪೈಕಿ ಕೆಲವೊಂದು ಮುಖ್ಯವಾದ ಪೋಲೀಸರ ಕರ್ತವ್ಯ ಮತ್ತು ಜವಾಬ್ದಾರಿಗಳು ಈ ರೀತಿ ಇವೆ. ಪೊಲೀಸರ ಮೂಲ ಕರ್ತವ್ಯಗಳೆಂದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳ ತಡೆ ಮತ್ತು ಪತ್ತೆ, ಸಂಚಾರ ವ್ಯವಸ್ಥೆಯ ನಿರ್ವಹಣೆ ಹಾಗೂ ವಿವಿಧ ಕಾನೂನುಗಳ ಮತ್ತು ಕಾಯ್ದೆ ಜಾರಿಗೊಳಿಸುವುದು. ಅಪರಾಧ ಎಸಗುವ ಸಿದ್ಧತೆಯಲ್ಲಿರುವ ಬಗ್ಗೆ ಅಥವಾ ಅಪರಾಧಆಗಿರುವ ಬಗ್ಗೆ ಅಥವಾ ಯಾವುದೇ ಪೊಲೀಸ್ ಅಧಿಕಾರಿಯ ಕರ್ತವ್ಯ ಪಾಲನೆಯ ಬಗ್ಗೆ ದೂರು ಇದ್ದಲ್ಲಿ, ಯಾರೇ ನಾಗರಿಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಅವರಲ್ಲಿರುವ ಮಾಹಿತಿಯನ್ನು ಕೊಡಬಹುದು.
ಆ ರೀತಿ ಪೊಲೀಸ್ ಠಾಣೆಗೆ ನೀಡಿದ ಮಾಹಿತಿಯಿಂದ ಸಂಜ್ಞೇಯ ಅಪರಾಧ ಜರುಗಿರುವುದು ಬೆಳಕಿಗೆ ಬಂದಲ್ಲಿ ಸದರಿ ಮಾಹಿತಿಯನ್ನು ಸ್ವೀಕರಿಸಿದ ಪೊಲೀಸ್ ಠಾಣಾ ಪ್ರಭಾರದಲ್ಲಿರುವ ಅಧಿಕಾರಿಯವರು ಪ್ರಥಮ ವರ್ತಮಾನ ವರದಿಯನ್ನು ಸಿದ್ಧಪಡಿಸಿ, ಅದರ ಪ್ರತಿಯನ್ನು ಆ ತಕ್ಷಣವೇ ಸುದ್ದಿ ನೀಡಿ ಪ್ರಥಮ ವರ್ತಮಾನ ದಾಖಲಾಗುವುದಕ್ಕೆ ಕಾರಣರಾದವರಿಗೆ ಉಚಿತವಾಗಿ ನೀಡಬೇಕಾಗುತ್ತದೆ. ಅಪರಾಧಗಳನ್ನು ಎರಡು ಭಾಗಗಳಾಗಿ ವರ್ಗೀಕರಿಸಿದೆ. (ಎ)ಸಂಜ್ಞೇಯ ಅಪರಾಧಗಳು, (ಬಿ) ಸಂಜ್ಞೇಯವಲ್ಲದ ಅಪರಾಧಗಳು. ಭಾರತೀಯ ದಂಡ ಸಂಹಿತೆ ಅಥವಾ ವಿಶೇಷ ಮತ್ತು ಇತರೆ ಸ್ಥಳೀಯ ಶಾಸನಗಳ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ವಾರಂಟ್ ಇಲ್ಲದೆ ದಸ್ತಗಿರಿ ಮಾಡಲು ಬರುವ ಅಪರಾಧಗಳು ಸಂಜ್ಞೇಯ ಅಪರಾಧಗಳೆನಿಸುತ್ತವೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ಪ್ರಕಾರ ಮುಖ್ಯ ಪೇದೆಗೂ ಮೇಲ್ಪಟ್ಪ ಯಾವುದೇ ಅಧಿಕಾರಿ ಒಂದು ಪೊಲೀಸ್ ಠಾಣೆಯ ಪ್ರಭಾರವನ್ನು ಠಾಣಾಧಿಕಾರಿಯಾಗಿ ನಿರ್ವಹಿಸಬಹುದು. ಪೊಲೀಸ್ ಉಪನಿರೀಕ್ಷಕರ ಅನುಪಸ್ಥಿತಿಯಲ್ಲಿ ಠಾಣೆಯಲ್ಲಿ ಹಾಕಿರುವ ಅತಿ ಹಿರಿಯ ಸಹಾಯಕ ಎಸ್.ಐ. ಅಥವಾ ಹಿರಿಯ ಮುಖ್ಯ ಪೇದೆ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವರು. ಯಾವುದೇ ವ್ಯಕ್ತಿ ಮೌಖಿಕವಾಗಿ ದೂರು ಕೊಟ್ಟಲ್ಲಿ ಅದನ್ನು ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಆ ದೂರನ್ನು ದಾಖಲಿಸಿಕೊಂಡು ಫಿರ್ಯಾದಿಗೆ ಓದಿ ಹೇಳಿ ಅದು ಸರಿ ಇದೆ ಎನ್ನುವ ಬಗ್ಗೆ ಸಹಿ ಪಡೆದು ಅನಂತರ ಪ್ರಥಮ ವರ್ತಮಾನ ವರದಿಯನ್ನು ಹೊರಡಿಸಬೇಕಾಗುತ್ತದೆ.
ಯಾವುದೇ ಠಾಣಾಧಿಕಾರಿಯು ಸಂಜ್ಞೇಯ ಅಪರಾಧವನ್ನೊಳಗೊಂಡ ದೂರನ್ನು ದಾಖಲಿಸಿಕೊಳ್ಳಲು ತಿರಸ್ಕರಿಸಿದಾಗ ಸಂಬಂಧಪಟ್ಟ ನಾಗರಿಕರು ಸದರಿ ದೂರಿನ ಸಾರಾಂಶವನ್ನು ಲಿಖಿತವಾಗಿ ಅಂಚೆಯ ಮೂಲಕ ಅಥವಾ ಖುದ್ದಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಸರಹದ್ದಿನ ಪೊಲೀಸ್ ಅಧೀಕ್ಷಕರಿಗೆ ಕಳುಹಿಸಬಹುದು. ಪೊಲೀಸ್ ಆಯುಕ್ತರ ಅಧೀನದಲ್ಲಿ ಬರುವ ಪ್ರದೇಶಗಳಲ್ಲಿ ಅಂತಹ ಪೊಲೀಸ್ ಠಾಣೆಯ ಸರಹದ್ದನ್ನು ಹೊಂದಿರುವ ಉಪಪೊಲೀಸ್ ಆಯುಕ್ತರವರಿಗೆ ದೂರು ಕಳುಹಿಸಬಹುದು. ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರುಗಳು/ ಉಪ ಪೊಲೀಸ್ ಆಯುಕ್ತರುಗಳು ಸದರಿ ಮಾಹಿತಿಯಲ್ಲಿ ಸಂಜ್ಞೇಯ ಅಪರಾಧದ ಮಾಹಿತಿಯಿದೆ ಎಂದು ಮನಗಂಡಲ್ಲಿ ತನಿಖೆ ನಡೆಸಬಹುದು. ತನ್ನ ಅಧೀನದಲ್ಲಿ ಬರುವ ಪೊಲೀಸ್ ಅಧಿಕಾರಿಯೊಬ್ಬರನ್ನು ತನಿಖೆ ನಡೆಸುವಂತೆ ಆದೇಶಿಸಬಹುದು. ಯಾವುದೇ ಸಂದರ್ಭದಲ್ಲಿ ನಾಗರಿಕರು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಸಂಜ್ಞೇಯ ಅಪರಾಧ ಕಂಡುಬಾರದಿದ್ದಲ್ಲಿ ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಅಧಿಕಾರಿಯವರು ಸದರಿ ದೂರನ್ನು ಸ್ವೀಕರಿಸಿ ತನಿಖೆ ಮಾಡಲು ನಿರಾಕರಿಸಬಹುದು ಮತ್ತು ಸರಹದ್ದನ್ನು ಹೊಂದಿರುವ ದಂಡಾಧಿಕಾರಿಯವರನ್ನು ಸಂಪರ್ಕಿಸಲು ಸಂಬಂಧಪಟ್ಟ ನಾಗರಿಕರಿಗೆ ತಿಳುವಳಿಕೆ ನೀಡಬಹುದು. ಲಿಖಿತವಾಗಿ ದೂರನ್ನು ಸಲ್ಲಿಸಿದ್ದಲ್ಲಿ ಪೊಲೀಸ್ ಠಾಣಾಧಿಕಾರಿಯವರು ದೂರನ್ನು ಸ್ವೀಕರಿಸಿದಕ್ಕೆ ಕಡ್ಡಾಯವಾಗಿ ಸ್ವೀಕೃತಿಯನ್ನು ನೀಡಬೇಕು. ಪೊಲೀಸರು ದೂರನ್ನು
ದಾಖಾಲಿಸಿಕೊಳ್ಳಲು ನಿರಾಕರಿಸಿದ್ದರ ಬಗ್ಗೆ ತೃಪ್ತಿಯಾಗದಿದ್ದರೆ ಅಂತಹ ಫಿರ್ಯಾದಿ ನಾಗರಿಕರು ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. ನ್ಯಾಯಾಲಯವು ಲಿಖಿತವಾಗಿ ನಿರ್ದೇಶಿಸಿದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯು ಪ್ರಕರಣವನ್ನು ದಾಖಾಲಿಸಿಕೊಂಡು ತನಿಖೆ ನಡೆಸುವರು. ಇಂತಹ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗೆ ವಾರೆಂಟ್ ಇಲ್ಲದೆ ಯಾರನ್ನೂ ದಸ್ತಗಿರಿ ಮಾಡುವ ಅಧಿಕಾರವಿರುವುದಿಲ್ಲ. ಪೊಲೀಸ್ ಠಾಣಾಧಿಕಾರಿಯ ದೂರಿನಲ್ಲಿ ತನಿಖೆ ನಡೆಸಲು ಸಾಕಷ್ಟು ಆಧಾರವಿಲ್ಲವೆಂಬುದು ಮನವರಿಕೆಯಾದಲ್ಲಿ ಪ್ರಥಮ ವರ್ತಮಾನದಲ್ಲಿ ಆ ಕಾರಣವನ್ನು ದಾಖಾಲಿಸಿ ಫಿರ್ಯಾದಿಗೆ ಸದರಿ ವಿಷಯವನ್ನು ತಿಳಿಸಿ ಪ್ರಥಮ ವರ್ತಮಾನದ ವರದಿಯ ಪ್ರತಿಯನ್ನು ನ್ಯಾಯಾಲಯಕ್ಕೂ ಕಳುಹಿಸಿ ಫಿರ್ಯಾದಿಗೆ ಆ ಬಗ್ಗೆ ಹಿಂಬರಹವನ್ನು ನೀಡಬೇಕಾಗುತ್ತದೆ.

ಕೆ. ವಿಜೇಂದ್ರ ಕುಮಾರ್, ಹಿರಿಯ ನ್ಯಾಯವಾದಿ, ಕಾರ್ಕಳ.

ಮೊ: 9845232490/9611682681

Latest Articles

error: Content is protected !!