ಭಾರತಕ್ಕಿಂದು ನೆದರ್‌ಲ್ಯಾಂಡ್ಸ್‌ ಎದುರಾಳಿ

ಗೆಲುವಿನ ಜೋಶ್‌ನಲ್ಲಿರುವ ಟೀಮ್‌ ಇಂಡಿಯಾ

ಸಿಡ್ನಿ : ಮೆಲ್ಬೋರ್ನ್‌ನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದ ವಿರುದ್ಧ ಗೆದ್ದು ಬೀಗಿರುವ ಟೀಂ ಇಂಡಿಯಾ ಸೂಪರ್‌ 12 ಹಂತದ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ಇಂದಿನ ಪಂದ್ಯದಲ್ಲಿ ಭಾರತಕ್ಕೆ ಸವಾಲು ಎಸೆಯಲು ಸಜ್ಜಾಗಿರುವುದು ಕ್ರಿಕೆಟ್‌ ಶಿಶು ನೆದರ್‌ಲ್ಯಾಂಡ್ಸ್‌
ಇಂದು ಸಿಡ್ನಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತನಗಿಂತ ಶ್ರೇಯಾಂಕದಲ್ಲಿ ಕೆಳಗಿರುವ ತಂಡವಾದ ನೆದರ್‌ಲ್ಯಾಂಡ್ಸ್‌ ವಿರುದ್ಧ ಆಡಲಿದೆ. ಆದರೂ, ಕ್ರಿಕೆಟ್‌ ಶಿಶುಗಳೆಂದು ಆ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ನೆದರ್‌ಲ್ಯಾಂಡ್ಸ್‌ ವಿರುದ್ಧ ಭರ್ಜರಿಯಾಗಿ ಗೆಲ್ಲುವತ್ತ ತಂಡ ಗಮನ ಹರಿಸಬೇಕಿದೆ.
ರೋಹಿತ್ ಶರ್ಮಾ ಅವರ ಫಾರ್ಮ್ ಭಾರತಕ್ಕೆ ಚಿಂತೆಯ ವಿಷಯವಾಗಿದೆ. ನಾಯಕ ಇತ್ತೀಚಿನ ಪ್ರವಾಸಗಳಲ್ಲಿ ಸಮರ್ಥವಾಗಿ ಬ್ಯಾಟ್‌ ಬೀಸಲು ವಿಫಲರಾಗಿದ್ದಾರೆ. ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲೂ ಕೆ. ಎಲ್. ರಾಹುಲ್ ಬೇಗನೆ ನಿರ್ಗಮಿಸಿದ ಬೆನ್ನಲ್ಲೇ, ರೋಹಿತ್‌ ಕೂಡಾ ಔಟಾದರು. ನಾಯಕನಾಗಿ ರೋಹಿತ್‌ ಫಾರ್ಮ್‌ ಚಿಂತೆ ಭಾರತಕ್ಕಿದೆ.
ವಿಶೇಷವೆಂದರೆ ಭಾರತ ಹಾಗೂ ನೆದರ್‌ಲ್ಯಾಂಡ್ಸ್‌ ಟಿ20 ಮಾದರಿಯಲ್ಲಿ ಇದುವರೆಗೂ ಮುಖಾಮುಖಿಯಾಗಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಜಗತ್ತಿನ ಅಗ್ರ ಶ್ರೇಯಾಂಕದ ತಂಡವಾದ ಭಾರತದ ವಿರುದ್ಧ ಆಡುವುದು, 17ನೇ ಶ್ರೇಯಾಂಕ ಹೊಂದಿರುವ ನೆದರ್‌ಲ್ಯಾಂಡ್ಸ್‌ ತಂಡಕ್ಕೂ ತುಂಬಾ ವಿಶೇಷ. ಹೀಗಾಗಿ ಮೊದಲ ಮುಖಾಮುಖಿಗೆ ಉಭಯ ತಂಡಗಳು ಕುತೂಹಲದಿಂದ ಕಾಯುತ್ತಿವೆ. ಭಾರತವು 2003 ಮತ್ತು 2011ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಎರಡು ಬಾರಿ ನೆದರ್‌ಲ್ಯಾಂಡ್ಸ್‌ ತಂಡವನ್ನು ಸೋಲಿಸಿದೆ.
0.050 ನೆಟ್‌ ರನ್ ರೇಟ್‌ನೊಂದಿಗೆ, ಭಾರತವು ಈಗ 2ನೇ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶದ 0.450 ರನ್‌ ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಹೀಗಾಗಿ ನಿವ್ವಳ ರನ್ ರೇಟ್ ಹೆಚ್ಚಿಸಲು ಮತ್ತು ಅಂಕಪಟ್ಟಿಯಲ್ಲಿ ಮೇಲೆರಲು ಇಂಡಿಯಾ ನೆದರ್‌ಲ್ಯಾಂಡ್ಸ್‌ ವಿರುದ್ಧ ಭಾರಿ ಅಂತರದ ವಿಜಯ ಸಾಧಿಸುವ ಇರಾದೆಯಲ್ಲಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 12:30ಕ್ಕೆ ಪಂದ್ಯ ಪ್ರಾರಂಭವಾಗಲಿದೆ.

Latest Articles

error: Content is protected !!