ಅತಿ ಹಿರಿಯ ಪಕ್ಷಕ್ಕಿದು ಐತಿಹಾಸಿಕ ಕ್ಷಣ
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ವಹಿಸಿಕೊಳ್ಳುವ ಸಮಾರಂಭ ಇಂದು ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಉತ್ತರಾಧಿಕಾರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಧವಾರ ಅಧಿಕಾರ ಹಸ್ತಾಂತರಿಸಲಿರುವ ಸಮಾರಂಭಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸಿದ್ಧತೆಗಳು ನಡೆದಿವೆ.
ಕಾಂಗ್ರೆಸ್ನ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಔಪಚಾರಿಕವಾಗಿ ಚುನಾವಣಾ ಪ್ರಮಾಣಪತ್ರವನ್ನು ಖರ್ಗೆ ಅವರಿಗೆ ಹಸ್ತಾಂತರಿಸಲಿದ್ದು, ನಂತರ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಖರ್ಗೆ ಅವರಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ.