ಪ್ಲೇಸ್ಟೋರ್ನಲ್ಲಿ ನೀತಿಬಾಹಿರ ವಾಣಿಜ್ಯ ನಡೆ ಅನುಸರಿಸಿದ ಆರೋಪ
ಹೊಸದಿಲ್ಲಿ: ಇತ್ತೀಚೆಗಷ್ಟೇ ಗೂಗಲ್ಗೆ 1337 ಕೋ.ರೂ. ದಂಡ ವಿಧಿಸಿದ್ದ ಕೇಂದ್ರ ಸ್ಪರ್ಧಾ ಆಯೋಗ ಇದೀಗ ಮತ್ತೊಮ್ಮೆ ಬರೋಬ್ಬರಿ 936 ಕೋ.ರೂ. ದಂಡ ಹಾಕಿದೆ. ಪ್ಲೇ ಸ್ಟೋರ್ಗೆ ಸಂಬಂಧಿಸಿದ ನೀತಿಗಳಲ್ಲಿ ತನಗಿರುವ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣ ಗೂಗಲ್ಗೆ ಈ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.
ಅ.20ರಂದು ಗೂಗಲ್ಗೆ 1337 ಕೋರೂ. ದಂಡ ವಿಧಿಸಿತ್ತು. ನ್ಯಾಯಸಮ್ಮತವಲ್ಲದ ವಾಣಿಜ್ಯ ನಡೆಗಳನ್ನು ಅನುಸರಿಸುತ್ತಿರುವ ಆರೋಪ ಗೂಗಲ್ ಮೇಲಿದೆ. ಅಭಿವೃದ್ಧಿಪಡಿಸಿದ appಗಳನ್ನು ಜನರಿಗೆ ತಲುಪಿಸುವ ವ್ಯವಸ್ಥೆ ಪ್ಲೇಸ್ಟೋರ್. ಆದರೆ ಇದರಲ್ಲಿ ಗೂಗಲ್ ಏಕಸ್ವಾಮ್ಯ ಹೊಂದಿದೆ. ಬೇರೆ ವ್ಯವಸ್ಥೆ ಇಲ್ಲದಿರುವ ಕಾರಣ ಪ್ಲೇಸ್ಟೋರ್ ಮೂಲಕವೇ appಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ. ಆದರೆ ಪ್ಲೇ ಸ್ಟೋರ್ಗೆ app ಹಾಕುವವರು ಗೂಗಲ್ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯ ಭಾಗವಾಗಿರಬೇಕೆಂಬ ನಿಯಮವಿದೆ. ಇದರಿಂದ ಗೂಗಲ್ಗೆ ಕೋಟಿಗಟ್ಟಲೆ ರೂಪಾಯಿ ಲಾಭವಾಗುತ್ತಿದೆ. ಇದು ನೀತಿಬಾಹಿರ ವ್ಯವಹಾರ ಎಂದು ಸ್ಪರ್ಧಾ ಆಯೋಗ ಹೇಳಿದೆ.