ಸ್ಥಳೀಯ ವ್ಯಾಪಾರಕ್ಕಿರಲಿ ಮೊದಲ ಪ್ರಾಮುಖ್ಯತೆ : ಆನ್‌ಲೈನ್‌ಗಿಂತ ಆಫ್‌ಲೈನ್ ಇರಲಿ ವ್ಯವಹಾರ – ಶುಭದ ರಾವ್

ಇನ್ನೇನು ದೀಪಾವಳಿ ಬಂತು. ಎಲ್ಲೆಲ್ಲೂ ಖರೀದಿಯ ಸಂಭ್ರಮ, ಮನೆಯಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಆರ್ಡರ್ ಮಾಡುವ ಮುನ್ನ ನಮ್ಮ ಸುತ್ತಮುತ್ತಲಿನ ಅಂಗಡಿಗಳಿಗೊಮ್ಮೆ ಭೇಟಿ ಕೊಡೋಣ. ಅವರೊಂದಿಗೆ ಸಂಬಂಧ ಬೆಳೆಸಿಕೊಳ್ಳೋಣ. ಕೇವಲ ಬೆಲೆ ಮಾತ್ರವಲ್ಲ ಮಾನವೀಯ ಸಂಬಂಧಗಳೂ ಮುಖ್ಯ. ಇಂದಿನ ದಿನಗಳಲ್ಲಿ ಆನ್‌ಲೈನ್‌ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಮಾರುತ್ತೇವೆ ಎಂದು ಜಾಹೀರಾತು ಮಾಡಿ ಕಳಪೆ ಗುಣಮಟ್ಟದ ವಸ್ತುಗಳನ್ನು ಯಾರಿಂದಲೋ ನಮ್ಮ ಮನೆಗೆ ತಲುಪಿಸುತ್ತಾರೆ. ಮನೆಗೆ ಬಂದ ವಸ್ತು ಹಾಳಾಗಿದ್ದರೆ ಯಾರಲ್ಲಿ ಕೇಳಬೇಕು ಎನ್ನುವ ವಿಚಾರಗಳೂ ನಮಗೆ ಗೊತ್ತಿರುವುದಿಲ್ಲ. ಕೇವಲ ದುಡ್ಡು ಮತ್ತು ಮೋಸ ಮಾಡುವ ಉದ್ದೇಶವನ್ನು ಹೊಂದಿರುವ ಇಂತಹ ಕಂಪೆನಿಗಳಿಂದ ನಮ್ಮ ಮನೆ ಪಕ್ಕದ, ನಮ್ಮ ಊರಿನ ಅಂಗಡಿಗಳಿಗೊಮ್ಮೆ ಭೇಟಿ ನೀಡೋಣ. ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ಗಿಂತಲೂ ಕಡಿಮೆ ಬೆಲೆಯಲ್ಲಿ ನಮ್ಮೂರಿನ ಅಂಗಡಿಗಳು ಆಫರ್ ನೀಡುತ್ತಿದೆ. ಕೇವಲ ಆಫರ್ ಮಾತ್ರವಲ್ಲ ಅದರ ಉತ್ತಮ ಸರ್ವಿಸ್ ಮನೆ ಬಾಗಿಲಿಗೆ ತಲುಪಿಸುವ ಅಂಗಡಿಗಳು ನಮ್ಮ ಸುತ್ತಮುತ್ತಲಿನಲ್ಲಿದೆ. ಆಫರ್ ಗಳೊಂದಿಗೆ ಅತ್ಯಾಕರ್ಷಕ ಉಡುಗೊರೆಗಳು ಸಿಗುತ್ತಿವೆ.
ಕೇವಲ ಸ್ವಾರ್ಥಕ್ಕಾಗಿ ಮಾತ್ರವಲ್ಲದೆ ಸ್ಥಳೀಯ ಅಂಗಡಿಯ ಮಾಲಕರು ಸರಕಾರಕ್ಕೆ ಮತ್ತು ಪುರಸಭೆಗೆ ತೆರಿಗೆ ಕಟ್ಟಿ ವ್ಯಾಪಾರ ಮಾಡುತ್ತಾರೆ ಮತ್ತು ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ ನೀಡಿದ್ದಾರೆ. ಸ್ಥಳೀಯ ಸಂಘಟನೆಗಳಿಗೆ, ಧಾರ್ಮಿಕ ಸ್ಥಳಗಳಿಗೆ, ಯುವಕ ಯುವತಿ ಮಂಡಲಗಳಿಗೆ ಕೊಡುಗೆ ಕೊಡುವವರೂ ಅವರೇ. ತಮ್ಮ ಲಾಭದ ಒಂದು ಪಾಲನ್ನು ಅವರು ಸಮಾಜಕ್ಕೆ ಹಿಂದಿರುಗಿಸುತ್ತಾರೆ. ಆನ್‌ಲೈನ್‌ನಲ್ಲಿ ಖರೀದಿಸಿದ ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳಿಗೆ ಸರ್ವೀಸ್ ನೀಡುವವರು ಸ್ಥಳೀಯ ವ್ಯಾಪಾರಸ್ಥರೆ. ಆನ್ಲೈನ್ ವಸ್ತುಗಳ ಬಗ್ಗೆ ಹಲವು ಆರೋಪಗಳು ಈಗಾಗಲೇ ಕೇಳಿ ಬಂದಿವೆ. ಸ್ಥಳೀಯ ವ್ಯಾಪಾರಿಗಳು ನಮ್ಮವರೇ ಎನ್ನುವ ಭಾವನೆಯಿಂದ ನಾವು ಸ್ಥಳೀಯವಾಗಿ ಖರೀದಿಸಿ ಅವರನ್ನು ಮತ್ತು ಪರೋಕ್ಷವಾಗಿ ಉದ್ಯೋಗ ಪಡೆದ ಯುವಕ, ಯುವತಿಯರನ್ನು ಬೆಳೆಸೋಣ ಅಲ್ಲವೇ?

ಶುಭದ ರಾವ್

error: Content is protected !!
Scroll to Top