ಬೊಮ್ಮಾಯಿ, ಕುಮಾರಸ್ವಾಮಿಯಿಂದಲೂ ಶುಭಾಶಯ
ಹೊಸದಿಲ್ಲಿ : ಬ್ರಿಟನ್ ದೇಶದ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ”ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನೀವು ಯುಕೆ ಪ್ರಧಾನಿಯಾಗುತ್ತಿದ್ದಂತೆ ಜಾಗತಿಕ ಸಮಸ್ಯೆಗಳ ಬಗ್ಗೆ ಜತೆಯಾಗಿ ಕೆಲಸ ಮಾಡಲು ಮತ್ತು ಮಾರ್ಗಸೂಚಿ 2030 ಅನ್ನು ಕಾರ್ಯಗತಗೊಳಿಸಲು ನಾನು ಎದುರು ನೋಡುತ್ತಿದ್ದೇನೆ. ನೀವು ಯುಕೆ ಭಾರತೀಯರ ಸಂಪರ್ಕ ಸೇತುವೆಯಾಗಲಿ, ವಿಶೇಷ ದೀಪಾವಳಿ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.
ಭಾರತದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು, ”ಮೊದಲು ಕಮಲಾ ಹ್ಯಾರಿಸ್, ಈಗ ರಿಷಿ ಸುನಕ್. ಅಮೆರಿಕ ಮತ್ತು ಬ್ರಿಟನ್‌ನ ಜನರು ತಮ್ಮ ದೇಶಗಳ ಬಹುಸಂಖ್ಯಾತರಲ್ಲದ ನಾಗರಿಕರನ್ನು ಅಪ್ಪಿಕೊಂಡಿದ್ದಾರೆ ಮತ್ತು ಅವರನ್ನು ಸರ್ಕಾರದ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಭಾರತ ಮತ್ತು ಬಹುಸಂಖ್ಯಾತವಾದವನ್ನು ಅನುಸರಿಸುವ ಪಕ್ಷಗಳು ಕಲಿಯಬೇಕಾದ ಪಾಠವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ”ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಅವರಿಗೆ ಅಭಿನಂದನೆಗಳು. ಈ ಉನ್ನತ ಹುದ್ದೆಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಮೊದಲ ವ್ಯಕ್ತಿ ನೀವು. ಯಶಸ್ವಿ ಅಧಿಕಾರಾವಧಿಗೆ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು, ”ಬ್ರಿಟನ್ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ನಡ ನೆಲದ ನಂಟು ಹೊಂದಿರುವ ಕನ್ಸರ್ವೇಟಿವ್ ಪಕ್ಷದ ನಾಯಕರಾದ ರಿಷಿ ಸುನಕ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯಂದಿರಾಗಿರುವ ರಿಷಿ ಸುನಕ್ ಅವರ ಆಯ್ಕೆ ನನಗೆ ಅತೀವ ಸಂತಸ ತಂದಿದೆ. ಆರ್ಥಿಕ ಸಂಕಷ್ಟ ಕಾಲದಲ್ಲಿ ರಿಷಿ ಸುನಕ್ ಅವರು ಬ್ರಿಟನ್ ದೇಶದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
