ಭಾರತ – ಅಮೆರಿಕ : ಹಬ್ಬಗಳ ಆಚರಣೆ ಭಿನ್ನ, ಆಶಯ ಒಂದೇ…


ಜಗತ್ತಿನಾದ್ಯಂತ ಆಚರಿಸಲ್ಪಡುವ ಹಬ್ಬವೆಂದರೆ ಕ್ರಿಸ್ಮಸ್ ಮಾತ್ರ ಎಂಬುದು ಹೆಚ್ಚಿನವರ ನಂಬಿಕೆ. ಆದರೆ ಭಾರತದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಾದ ದೀಪಾವಳಿ, ಸಂಕ್ರಾಂತಿ, ಮತ್ತು ತೆನೆಹಬ್ಬಗಳನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಆಚರಿಸುತ್ತಾರೆಂದು ಬಹುಶಃ ಹೆಚ್ಚಿನವರಿಗೆ ತಿಳಿದಿಲ್ಲ. ವಿದೇಶದಲ್ಲಿ ಇರುವ ಭಾರತೀಯರಲ್ಲಿ ಕೆಲವರಾದರೂ ದೀಪಾವಳಿ ಸೇರಿದಂತೆ ಕೆಲವು ಹಬ್ಬಗಳನ್ನು ಅದೇ ಹೆಸರಿನಲ್ಲಿ ಆಚರಿಸುವುದಿದೆ. ಮಾತ್ರವಲ್ಲ ವಿದೇಶೀಯರೂ ಅವರದೇ ಆದ ಶೈಲಿಯಲ್ಲಿ ಇಂತಹದೇ ಹಬ್ಬಗಳನ್ನು ಆಚರಿಸುತ್ತಾರೆ, ಅವುಗಳ ಹೆಸರು ಮಾತ್ರ ಬೇರೆ, ಮೂಲ ಆಶಯ ಒಂದೇ. ಈ ಕುರಿತಂತೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಹ್ಯಾಲೋವೀನ್
ವಿಶ್ವಾದ್ಯಂತ ಹತ್ತಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಅಕ್ಟೋಬರ್ 31ರಂದು ಆಚರಿಸಲ್ಪಡುವ ಹಬ್ಬಗಳಲ್ಲಿ ಹ್ಯಾಲೋವೀನ್ ಒಂದು. ಈ ಹಬ್ಬವನ್ನು ಭಾರತದಲ್ಲಿ ಪ್ರತ್ಯೇಕವಾಗಿ ಅದೇ ಹೆಸರಿನಲ್ಲಿ ಆಚರಿಸುವ ಸಂಪ್ರದಾಯವಿರಲಿಲ್ಲ. (ಪಾಶ್ಚಾತ್ಯರನ್ನು ಅನುಕರಿಸುವ ಅಭ್ಯಾಸದಿಂದ ಕೆಲವರು ಮಂಗಳೂರಿನಲ್ಲಿ ಒಂದೆರಡು ವರ್ಷಗಳ ಹಿಂದೆ ಆಯೋಜಿಸಿದ್ದನ್ನು ಓದಿದ ನೆನಪು) ಆದರೆ ಈ ಆಚರಣೆಯ ವಿಧಾನವು ನಮ್ಮ ದೇಶದ, ಮುಖ್ಯವಾಗಿ ದಕ್ಷಿಣ ಭಾರತದ ನರಕ ಚತುರ್ದಶಿ, ದೀಪಾವಳಿ, ಬಲಿ ಪಾಡ್ಯಗಳನ್ನು ಹೋಲುತ್ತದೆ. ಇದೊಂದು ರೀತಿ ಗತಿಸಿದ ಆತ್ಮಗಳ, ಪೂರ್ವಜರ, ದೈವಿಕ ಸ್ಮರಣೆ ಎನ್ನಬಹುದು. ಈ ಆಚರಣೆಯ ಪೂರ್ವಭಾವಿಯಾಗಿ ತಿಂಗಳಿಗೂ ಮೊದಲು ಬಹುತೇಕ ವಾಣಿಜ್ಯ ಮಳಿಗೆಗಳಲ್ಲಿ ಪ್ರತ್ಯೇಕ ವಿಭಾಗಗಳು ತೆರೆಯಲ್ಪಡುತ್ತದೆ. ಇಲ್ಲೆಲ್ಲಾ ಆಚರಣೆಗೆ ಬೇಕಾಗುವ ವೇಷಭೂಷಣಗಳು ಲಭ್ಯವಿರುತ್ತವೆ. ಈ ಹಬ್ಬದಲ್ಲಿ ಸಿಹಿ ಕುಂಬಳವನ್ನು ವಿವಿಧ ಆಕಾರದಲ್ಲಿ ಅಲಂಕರಿಸಿ ಮನೆಗಳ ಮುಂದೆ ಇಡುವುದೂ ಒಂದು ಪ್ರಮುಖ ಆಕರ್ಷಣೆ. ಈ ಹಬ್ಬದ ಆಚರಣೆಯಲ್ಲಿ ಚಿಕ್ಕ ಮಕ್ಕಳ ಭಾಗವಹಿಸುವಿಕೆ ಗಮನಾರ್ಹ. ಚಿತ್ರ ವಿಚಿತ್ರ ವೇಷಭೂಷಣ ಧರಿಸಿ ಮಳಿಗೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದನ್ನು ನೋಡುವುದೇ ಚಂದ. ಮಾತ್ರವಲ್ಲ ಮುಖವಾಡ ಧರಿಸಿದ ಪುಟಾಣಿ ಮಕ್ಕಳು ಮನೆ ಮನೆಗೆ ತೆರಳಿ ಚಿಕ್ಕ ಬುಟ್ಟಿಯೊಂದರಲ್ಲಿ ಚಾಕಲೇಟ್ ಸಂಗ್ರಹಿಸುತ್ತಾರೆ. ನಮ್ಮಲ್ಲಿರುವಂತೆ ಅತಿಯಾಗಿ ಬಣ್ಣ ಹಚ್ಚುವುದಿಲ್ಲ. ಒತ್ತಡ ಪೂರ್ವಕ ವಸೂಲಿ ಇಲ್ಲ. ಯಾರಿಗಾದರೂ ಮಕ್ಕಳು ಮನೆಗೆ ಬರುವುದರಲ್ಲಿ ಆಸಕ್ತಿ ಇಲ್ಲದಿದ್ದರೆ ಮನೆಯ ಬಾಗಿಲಿಗೆ “do not disturb” ಫಲಕ ತೂಗುಹಾಕಿದರೆ ತೆಪ್ಪಗೆ ವಾಪಸ್ಸು ಹೋಗುತ್ತಾರೆ. ಪುಟ್ಟ ಮಕ್ಕಳು ಮಳಿಗೆಗಳಲ್ಲಿ ಇರುವ ಪೋಲಿಸ್ ವಾಹನಗಳ ಪಕ್ಕದಲ್ಲಿ, ಪೋಲೀಸರ ಜತೆಗೆ ಮತ್ತು ಪೋಲೀಸಣ್ಣ/ಪೋಲೀಸ್ ಅಕ್ಕನ ಜತೆಗೆ ಫೋಟೊ ತೆಗೆಸಿಕೊಳ್ಳುವ, ಪೋಲೀಸರು ಮಕ್ಕಳಿಗೆ ಚಾಕಲೇಟ್ ಬಹುಮಾನ ನೀಡುವ ಪ್ರಕ್ರಿಯೆ-ಎಳವೆಯಲ್ಲೇ ಕಾನೂನು ಪಾಲಕರೊಡನೆ ಆತ್ಮೀಯತೆಯ ಪಾಠವನ್ನು ಕಲಿಸುವ ಉದ್ದೇಶ ಇರಬಹುದೆಂದು ನನ್ನ ಅನಿಸಿಕೆ.
ಥ್ಯಾಂಕ್ಸ್ ಗಿವಿಂಗ್
ಅಮೆರಿಕದಲ್ಲಿ ಪ್ರತಿ ವರ್ಷದ ನವಂಬರ ತಿಂಗಳ ಕೊನೆಯ ಗುರುವಾರ ಮತ್ತು ಕೆನಡಾದಲ್ಲಿ ಪ್ರತಿ ಅಕ್ಟೋಬರ್ ಎರಡನೇ ಸೋಮವಾರ ಒಂದು ವಿಶಿಷ್ಟ ಆಚರಣೆಯಿದೆ. ಅದುವೇ “ಧನ್ಯವಾದ ಸಮರ್ಪಣೆ”. ಕೃಷಿ ಚಟುವಟಿಕೆಗಳನ್ನು ಮತ್ತು ಕಟಾವು ಮುಗಿಸಿದ ನಂತರ ಅದಕ್ಕಾಗಿ ದುಡಿದವರಿಗೆ ಧನ್ಯವಾದ ಸಮರ್ಪಿಸುವ ಆಚರಣೆಯಾಗಿ ಹದಿನೇಳನೇ ಶತಮಾನದಲ್ಲಿ ಆರಂಭಿಸಲಾಗಿತ್ತೆಂದು ಹೇಳಲಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳ ಕೌಟುಂಬಿಕ ವ್ಯವಸ್ಥೆಯು ಭಾರತೀಯ ವ್ಯವಸ್ಥೆಗಿಂತ ಭಿನ್ನ. ಅಲ್ಲೆಲ್ಲಾ ನಮ್ಮ ದೇಶದಲ್ಲಿರುವಂತೆ ಕೂಡು ಕುಟುಂಬದ ವ್ಯವಸ್ಥೆಯಿಲ್ಲ. ಹಿರಿಯರು ಒಂದೆಡೆಯಾದರೆ, ಮಕ್ಕಳು ಇನ್ನೊಂದೆಡೆ. ಮೇಲೆ ಹೇಳಲಾದ ಧನ್ಯವಾದ ಸಲ್ಲಿಸುವ ಆಚರಣೆಯಂದು ಎಲ್ಲರೂ ಒಟ್ಟುಗೂಡುತ್ತಾರೆ. ಮಕ್ಕಳು ಅವರ ಹೆತ್ತವರಿಗೆ ಉಡುಗೊರೆ ನೀಡುವ ಕ್ರಮವೂ ಇದೆ. ಹಾಗೆಯೇ ಟರ್ಕಿ ಕೋಳಿಯ ಮಾಂಸದಿಂದ ವಿಶಿಷ್ಟ ಅಡುಗೆ ಮಾಡಿ ಎಲ್ಲರೂ ಸೇರಿ ಊಟ ಮಾಡುವ ಪದ್ಧತಿಯೂ ಇದೆ. ಥ್ಯಾಂಕ್ಸ್ ಗಿವಿಂಗ್ ದಿನ ಟರ್ಕಿ ಕೋಳಿ ಊಟ ಮುಖ್ಯವಾದ ಅಡುಗೆ. ಇನ್ನೊಂದು ವೈಶಿಷ್ಟ್ಯವೆಂದರೆ, ರಾಷ್ಟ್ರದ ಅಧ್ಯಕ್ಷರು ಒಂದು ಟರ್ಕಿ ಕೋಳಿಗೆ ಕ್ಷಮೆ ಕೊಟ್ಟು ಬಿಡುಗಡೆ ಮಾಡುವ ಸಂಪ್ರದಾಯವಿದೆ. ಇದನ್ನು 19-11-1963 ರಂದು ಆಗಿನ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಆರಂಭಿಸಿದರಂತೆ. ಕ್ರಮೇಣ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸಿತು. ಆದರೂ ಕುಟುಂಬದವರು ಒಟ್ಟುಗೂಡಿ ಊಟ ಮಾಡುವ, ಉಡುಗೊರೆ ನೀಡುವ ಪದ್ಧತಿ ಮಾತ್ರ ಮುಂದುವರಿದಿದೆ. ಇದಕ್ಕೆಂದೇ ಬಹುತೇಕ ಮಳಿಗೆಗಳಲ್ಲಿ ದರ ಕಡಿತದ ಮಾರಾಟವಿದ್ದು. ಇಂತಹ ದರ ಕಡಿತದ ಮಾರಾಟ ಸಾಕಷ್ಟು ಮುಂಚಿತವಾಗಿ ಆರಂಭವಾಗುತ್ತದೆ. ಇದರ ಲಾಭವನ್ನು ಇತ್ತೀಚಿನ ದಿನಗಳಲ್ಲಿ ಭಾರತೀಯರೂ ಪಡೆದುಕೊಳ್ಳುತ್ತಾರೆ. ಏಕೆಂದರೆ ದರ ಕಡಿತ ಕೇವಲ ತೋರಿಕೆಗಿರುವುದಿಲ್ಲ. ಒಳ್ಳೆಯ ಗುಣಮಟ್ಟವಿರುತ್ತದೆ ಮತ್ತು ದರ ಕಡಿತ ಖಚಿತವಾಗಿರುತ್ತದೆ.
ಕಪ್ಪು ಶುಕ್ರವಾರ
ಪ್ರತಿ ವರ್ಷದ ನವಂಬರ ತಿಂಗಳ ಕೊನೆಯ ಶುಕ್ರವಾರದಿಂದ ಆರಂಭವಾಗುವ ಈ ಉತ್ಸವ ಡಿಸೆಂಬರ್ ಅಂತ್ಯದ ಕ್ರಿಸ್ಮಸ್ ತನಕವೂ ಮುಂದುವರಿಯುತ್ತದೆ. ಈ ಆಚರಣೆಯ ಪ್ರಮುಖ ಆಕರ್ಷಣೆ ದರ ಕಡಿತದ ಮಾರಾಟ. ಮೂಲತಃ 1612ರಲ್ಲಿ ಚಿನ್ನದ ಬೆಲೆ ವಿಪರೀತ ಹೆಚ್ಚಾಗಿ ಮಾರುಕಟ್ಟೆಯಲ್ಲಿ ವಿಪ್ಲವವಾದಾಗ ಅಂದಿನ ಅಮೆರಿಕ ಅಧ್ಯಕ್ಷರು ಸರಕಾರಿ ಖಜಾನೆಯಿಂದ ದೊಡ್ಡ ಪ್ರಮಾಣದಲ್ಲಿ ಚಿನ್ನ ಬಿಡುಗಡೆ ಮಾಡಿ ಸಂಭಾವ್ಯ ಕುಸಿತವನ್ನು ತಡೆಗಟ್ಟಿದರೆಂದು ದಾಖಲೆಗಳು ಹೇಳುತ್ತವೆ. ನಂತರದ ದಿನಗಳಲ್ಲಿ ವಿವಿಧ ರಾಜಕೀಯ ಮತ್ತು ಸೈದ್ಧಾಂತಿಕ ಕಾರಣಗಳಿಂದ ಹಲವು ಮಜಲುಗಳನ್ನು ದಾಟಿಬಂದ ಬ್ಲ್ಯಾಕ್ ಫ್ರೈಡೇ ಎಂಬುದು ಆಚರಣೆಗಿಂತ ಹೆಚ್ಚಾಗಿ ವ್ಯಾವಹಾರಿಕವಾಗಿದೆ. ಪ್ರತಿ ವರ್ಷದ ಜನವರಿ ತಿಂಗಳಲ್ಲಿ ಹೊಸ ಆರ್ಥಿಕ ವರ್ಷ ಆರಂಭವಾಗುವುದರಿಂದ, ತೆರಿಗೆ ವ್ಯತ್ಯಾಸವಾಗುತ್ತದೆ, ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ. ಹೀಗಾಗಿ ಹಳೆಯ ದಾಸ್ತಾನು ಮಾರಾಟ ಮಾಡಿ, ಹೊಸದನ್ನು ತರಿಸುವುದಕ್ಕಾಗಿ ವ್ಯಾಪಾರಿಗಳು ತಮ್ಮಲ್ಲಿರುವವುಗಳನ್ನು ಕಡಿಮೆ ದರದಲ್ಲಿ ಮಾರಾಟಕ್ಕೆ ಇಡುತ್ತಾರೆ. ಇದು ನವಂಬರ ತಿಂಗಳ ಕೊನೆಯ ಶುಕ್ರವಾರದಿಂದ ಡಿಸೆಂಬರ್ ಅಂತ್ಯದವರೆಗೂ ಮುಂದುವರಿಯುತ್ತದೆ. ಹಿಂದೆಲ್ಲಾ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು ಇಂತಹ ಕೊಡುಗೆಗಳನ್ನು ನೀಡುತ್ತಿದ್ದರೆ, ಕ್ರಮೇಣ ಪಾಶ್ಚಾತ್ಯ ರಾಷ್ಟ್ರಗಳ ವ್ಯಾವಹಾರಿಕ ಚಿತ್ರಣವೇ ಬದಲಾಯಿತು. ವಾಲ್ಮಾರ್ಟ್, ಟಾರ್ಗೆಟ್, ಕೋಸ್ಟ್ ಕೋ, ಶ್ಯಾಮ್ಸ್ ಕ್ಲಬ್ ಮುಂತಾದ ದೈತ್ಯ ಉದ್ಯಮಗಳು ಸಣ್ಣ, ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಸವಾಲಾಗತೊಡಗಿದವು. ಇತ್ತೀಚಿನ ದಶಕಗಳಲ್ಲಿ ಇಂತಹ ದೈತ್ಯ ಉದ್ಯಮಗಳೂ ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ಸೆಳೆಯತೊಡಗಿವೆ. ಪೈಪೋಟಿ ಹೆಚ್ಚಾಗಿ ಕೆಲಸದ ಅವಧಿಯಲ್ಲಿ ಹೆಚ್ಚಳ, ದರ ಕಡಿತಗಳ ಜತೆಯಲ್ಲಿ ಮೊದಲು ಬಂದವರಿಗೆ ಡಿಸ್ಕೌಂಟ್ ಕೂಪನ್ ನೀಡುವುದೇ ಮೊದಲಾದ ವ್ಯಾಪಾರಿ ತಂತ್ರಗಳು ಬಳಕೆಗೆ ಬರತೊಡಗಿದವು. ಇದರ ಲಾಭ ಪಡೆಯಲು ಬೆಳಕು ಹರಿಯುವ ಮೊದಲೇ ಮಳಿಗೆಗಳ ಹೊರಗೆ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ದೊಡ್ಡದಾಗಿಯೇ ಇರುತ್ತದೆ. ಭಾರತದಲ್ಲಿ ದೀಪಾವಳಿಗೆ ಆರಂಭವಾದ ದರ ಕಡಿತದ ಮಾರಾಟ ಕ್ರಿಸ್ಮಸ್, ಸಂಕ್ರಾಂತಿಗೆ ಮುಂದುವರಿದು ಯುಗಾದಿವರೆಗೂ ಇರುತ್ತದೆ. ಏಕೆಂದರೆ ನಮ್ಮ ಆರ್ಥಿಕ ವರ್ಷ ಆರಂಭವಾಗುವುದು ಯುಗಾದಿ ಅಕ್ಕಪಕ್ಕದ ಎಪ್ರಿಲ್ 1ಕ್ಕೆ. ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಇಂತಹ ನೂಕುನುಗ್ಗಲು ಕೊರೋನಾ ಕಾರಣಕ್ಕೆ ಇತ್ತೀಚಿನ ಒಂದೆರಡು ವರ್ಷ ಇರಲಿಲ್ಲ. ಈಗ ಪುನಃ ಆರಂಭವಾಗಿದೆ.
ಇದಿಷ್ಟು ಭಾರತದ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಹಬ್ಬಗಳ ನಡುವಿನ ಹೋಲಿಕೆಯಾದರೆ, ಉದ್ಯೋಗ ನಿಮಿತ್ತ ವಿದೇಶದಲ್ಲಿ ಇರುವವರಲ್ಲಿ ಕೆಲವರಾದರೂ ಭಾರತೀಯ ಹಬ್ಬಗಳಾದ, ಶ್ರಾವಣ, ಗೌರಿ ಹಬ್ಬ, ಚೌತಿ, ದೀಪಾವಳಿ ಸೇರಿದಂತೆ ಬಹುತೇಕ ಹಬ್ಬಗಳನ್ನು ಆಚರಿಸುತ್ತಾರೆ. ಅದರಲ್ಲೂ ಉದ್ಯೋಗ ನಿಮಿತ್ತ ಅಮೇರಿಕಾ ಮತ್ತು ಕೆನಡ ದೇಶಗಳಲ್ಲಿ ನೆಲೆಸಿರುವವರ ಹೆತ್ತವರು ಅಥವಾ ನಿಕಟ ಸಂಬಂಧಿಗಳು ಪ್ರವಾಸ ನಿಮಿತ್ತ ಬಂದಾಗ ಇಂತಹ ಯಾವುದೇ ಹಬ್ಬಗಳನ್ನು ಆಚರಿಸುತ್ತಾರೆ.
ಇದಿಷ್ಟು ಒಂದು ವರ್ಗದ ಕತೆಯಾದರೆ ಗುಜರಾತ್, ಮಹಾರಾಷ್ಟ್ರದ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಪ್ರದೇಶದಲ್ಲಿ ಇದ್ದರೆ, ಆ ಪ್ರದೇಶದಲ್ಲಿ ಇರುವ ದೇವಾಲಯಗಳಲ್ಲಿ ಇಂತಹ ಆಚರಣೆಗಳನ್ನು ಸಾಮೂಹಿಕವಾಗಿ ಆಚರಿಸುವುದೂ ಇದೆ. ಮನೆಯಲ್ಲಿ ಗಣೇಶ ಮೂರ್ತಿ ಇರಿಸಿ, ಪೂಜೆಯ ನಂತರ ಎಲ್ಲಾ ಮನೆಗಳ ಗಣೇಶ ಮೂರ್ತಿಗಳನ್ನು ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆ ಮಾಡುತ್ತಾರೆ. ಇಂತಹ ಸಂಭ್ರಮಗಳನ್ನು ನೋಡುವುದೇ ಚಂದ!
ಅಮೆರಿಕ, ಕೆನಡ ದೇಶದ ಉದ್ದಗಲಕ್ಕೂ ಹಿಂದೂ ದೇವಾಲಯಗಳಿವೆ. ಗುಜರಾತ್ ಮೂಲದ ಸ್ವಾಮಿ ನಾರಾಯಣ ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಒಂದು ಕಾಂಬೋಡಿಯಾ ದೇವಸ್ಥಾನವಿದೆ. ಅದರ ರಚನೆ ಮಾತ್ರ ಅದ್ಭುತ! ಹಿಂದೂ ದೇವಾಲಯಗಳಲ್ಲಿ ಗಣೇಶ, ನವಗ್ರಹ ಮಾತ್ರವಲ್ಲದೆ ನಾಗಾಲಯವೂ ಇದೆ. ಆದರೆ ನಮ್ಮ ದೇಶದಲ್ಲಿ ಇರುವಂತಹ ಕಾಂತೀಯ ಗುಣಗಳು ಇಲ್ಲ. ಆದ್ದರಿಂದ ಭವ್ಯತೆ, ಶಿಲ್ಪಕಲೆಗೆ ಹೋಲಿಸಿದರೆ ನಮ್ಮ ದೇಶದವುಗಳಿಗೆ ಯಾವುದರಲ್ಲೂ ಸಾಟಿ ಇಲ್ಲ. ಆದರೂ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯೇನಿಲ್ಲ. ದೊಡ್ಡ ದೇವಸ್ಥಾನಗಳು ಮತ್ತು ಚಿಕ್ಕ ಪುಟ್ಟ ಆಶ್ರಮಗಳೂ ಸೇರಿ ಇಡೀ ಅಮೆರಿಕದಲ್ಲಿ ಸುಮಾರು 900ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಕೇಂದ್ರಗಳಿವೆ.
ಔದ್ಯೋಗಿಕ ನೆಲೆಯಲ್ಲಿ ವಿದೇಶಗಳಲ್ಲಿ ನೆಲೆಸುವುದು ಅನಿವಾರ್ಯ ಆಗಿರಬಹುದು, ಆದರೆ ಸ್ವಾತಂತ್ರ್ಯ ಬೇರೆ, ಸ್ವೇಚ್ಚಾಚಾರ ಬೇರೆ ಎಂಬ ಮೂಲಭೂತ ವಿಚಾರ ಸದಾ ನೆನಪಿನಲ್ಲಿರಬೇಕು. ವೃಕ್ಷ ಜೀವಂತ ಇರಬೇಕಾದರೆ, ಕೇವಲ ಕೊಂಬೆ ರೆಂಬೆಗಳು ಬೆಳೆದರೆ ಸಾಲದು, ಬೇರುಗಳು ಆಳವಾಗಿ ಇರಬೇಕು. ಉದ್ಯೋಗದ ಆಕರ್ಷಣೆ, ಅನಿವಾರ್ಯತೆಗಳಿಂದ ವಿದೇಶದಲ್ಲಿ ನೆಲೆಸುವುದು ಸರಿಯೆಂಬ ಭಾವನೆ ಸರಿಯಿರಬಹುದು. ಸನಾತನ ಸಂಸ್ಕೃತಿಯ ಬೇರುಗಳ ಕನಿಷ್ಟ ಪರಿಚಯ ಇಲ್ಲದಿದ್ದರೆ, ಆಚರಣೆಗಳ ಬಗ್ಗೆ ಹುಟ್ಟೂರಿನ ಕುರಿತು ಮುಂದಿನ ಜನಾಂಗಕ್ಕೆ ಮಾಹಿತಿ ಕೊಡದಿದ್ದರೆ ಅಂತಹ ಕುಟುಂಬ ವ್ಯವಸ್ಥೆ ಮುಂದೊಂದು ದಿನ ಕೊಂಡಿಗಳು ಶಾಶ್ವತವಾಗಿ ಕಳಚಿಕೊಳ್ಳುವ ಅಪಾಯ ಇದ್ದೇ ಇರುತ್ತದೆ.
ಮೋಹನದಾಸ ಕಿಣಿ, ಕಾಪು
ನಿವೃತ್ತ ಕಚೇರಿ ಅಧೀಕ್ಷಕ, ಆರೋಗ್ಯ ಇಲಾಖೆ
ಮತ್ತು ಹವ್ಯಾಸಿ ಬರಹಗಾರ.
kini.mohandas@gmail.com

Latest Articles

error: Content is protected !!