ಕಾಂತಾರ ವಿರುದ್ಧ ಕೃತಿಚೌರ್ಯದ ಆರೋಪ

ವರಾಹಂ ರೂಪಂ ಹಾಡು ನಮ್ಮದು ಎನ್ನುತ್ತಿರುವ ಕೇರಳದ ತೆಕ್ಕುಡಂ ಬ್ರಿಡ್ಜ್‌ ತಂಡ

ಬೆಂಗಳೂರು: ಸೂಪರ್‌ ಹಿಟ್‌ ಆಗಿರುವ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾದ ಮೇಲೆ ಕೃತಿಚೌರ್ಯದ ಆರೋಪ ಕೇಳಿ ಬಂದಿದೆ. ಎಲ್ಲರ ನಾಲಗೆ ಮೇಲೆ ನಲಿಯುತ್ತಿರುವ ಚಿತ್ರದ ವರಾಹ ರೂಪಂ… ಹಾಡಿನ ಕುರಿತು ಕೇರಳದ ನವರಸಂ ಆಲ್ಬಂನ ತೆಕ್ಕುಡಂ ಬ್ರಿಡ್ಜ್‌ ತಂಡದವರು ಕೇಸ್‌ ದಾಖಲಿಸುವುದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.
ಕಾಂತಾರ ಚಿತ್ರ ಬಿಡುಗಡೆಯಾದಗಿನಿಂದಲೇ ವರಾಹ ರೂಪಂ ಹಾಡಿಗೂ ತೈಕ್ಕುಡಂ ಬ್ರಿಡ್ಜ್‌ನ ನವರಸಂ ಆಲ್ಬಂನ ನಕಲು ಎಂದು ಸಾಕಷ್ಟು ಜನರು ಆರೋಪಿಸಿದ್ದರು. ಆ ಹಾಡಿಗೂ, ಈ ಹಾಡಿಗೂ ಸಾಕಷ್ಟು ಸಾಮ್ಯತೆ ಇರುವುದಾಗಿ ಬಹುತೇಕರು ಅಭಿಪ್ರಾಯಪಟ್ಟಿದ್ದರು. ಆದರೆ, ತಡವಾಗಿ ಪ್ರತಿಕ್ರಿಯೆ ನೀಡಿದ ಸಂಗೀತ ನಿರ್ದೇಶಕ ಅಜನೀಶ್‌ ಅದು ಬೇರೆ, ಇದು ಬೇರೆ ಎಂದಿದ್ದರು. ಆದರೆ ನವರಸಂ ತಂಡ ಎರಡು ಹಾಡುಗಳ ನಡುವೆ ಬಹಳಷ್ಟು ಸಾಮ್ಯತೆʼ ಇರುವುದಾಗಿ ಹೇಳಿದೆ.
ನಾವು ನಮ್ಮ ಸಂಗೀತ ಕೇಳುಗರಿಗೆ ತಿಳಿಸುವುದೇನೆಂದರೆ, ತೈಕ್ಕುಡಂ ಬ್ರಿಡ್ಜ್‌ ಮತ್ತು ಕಾಂತಾರ ನಡುವೆ ಯಾವುದೇ ವ್ಯವಹಾರ, ಒಪ್ಪಂದಗಳು ಆಗಿಲ್ಲ. ನಮ್ಮ ಐಪಿ ನವರಸಂ ಮತ್ತು ವರಾಹ ರೂಪಂ ನಡುವೆ ನಿರಾಕರಿಸಲಾಗದ ಸಾಮ್ಯತೆ ಇದೆ. ಹೀಗಾಗಿ, ಇದು ಸ್ಪಷ್ಟ ಕಾಪಿರೈಟ್‌ ಉಲ್ಲಂಘನೆʼ ಎಂದು ತೈಕ್ಕುಡಂ ಬ್ರಿಡ್ಜ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.
ನಾವು ಯಾವುದೇ ಟ್ಯೂನ್ ಕದ್ದಿಲ್ಲ. ಒಂದೇ ರೀತಿಯ ರಾಗಗಳನ್ನು ಮತ್ತು ಅಲ್ಲಿನ ಶೈಲಿಯನ್ನು ನಾವಿಲ್ಲಿ ಬಳಸಿಕೊಂಡಿದ್ದೇವೆ. ಆದರೆ, ಕಂಪೋಸಿಂಗ್‌ ಬೇರೆಯದೇ ಇದೆ. ಹಾಗಾಗಿ ಈ ಎರಡೂ ಹಾಡುಗಳು ಬೇರೆ ಬೇರೆ. ರೆಫರೆನ್ಸ್‌ಗೆ ಎಂದು ಒಮ್ಮೊಮ್ಮೆ ಹಾಡುಗಳನ್ನು ರಫ್ ಆಗಿ ಬಳಸಿರುತ್ತೇವೆ. ಆದರೆ ನಾನು ನಕಲು ಎಂಬುದನ್ನು ಒಪ್ಪುವುದಿಲ್ಲ ಎಂದು ಅಜನೀಶ್ ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ನವರಸಂ ಹಾಡನ್ನು ಕೇಳಿದ್ದೇನೆ. ಆ ಹಾಡು ನನಗೆ ಸ್ಫೂರ್ತಿ ನೀಡಿತ್ತು. ಎರಡು ಒಂದೇ ರೀತಿ ಇದೆ ಎನಿಸಿದರೆ, ಅದಕ್ಕೆ ಕಾರಣ ಅದರ ರಾಗ. ತೋಡಿ, ವರಾಳಿ, ಮುಖಾರಿ ರಾಗಗಳನ್ನು ಮಿಕ್ಸ್ ಮಾಡಿ ಈ “ವರಾಹ ರೂಪಂ” ಹಾಡನ್ನು ಮಾಡಿದ್ದೇನೆ. ಸಂಗೀತ ಬಲ್ಲವರಿಗೆ ಇದನ್ನು ಕೇಳಿಸಿದರೆ ಆ ಹಾಡೇ ಬೇರೆ ಈ ಹಾಡೇ ಬೇರೆ ಎಂದು ಅಜನೀಶ್‌ ಉತ್ತರ ನೀಡಿದ್ದಾರೆ.

Latest Articles

error: Content is protected !!