ಕಗ್ಗದ ಸಂದೇಶ- ದೇಹ ಸುಖಕ್ಕಿಂತ ಆತ್ಮಕ್ಕೆ ಆಗುವ ಲಾಭ ಮುಖ್ಯ

ತನುವ ತಣಿಸುವ ತುತ್ತು ಮನಕೆ ನಂಜಾದೀತು|
ಮನಮೋಹ ಜೀವಕ್ಕೆ ಗಾಳವಾದೀತು|
ಅನುಭವದ ಪರಿಣಾಮವೊಂದರಿಂದೊಂದಕ್ಕೆ|
ಗಣಿಸಾತ್ಮ ಲಾಭವನು–ಮಂಕುತಿಮ್ಮ||

ದೇಹಕ್ಕೆ ಸಂತೋಷವನ್ನು ನೀಡುವ ಉಣಿಸು ಮನಸ್ಸಿಗೆ ವಿಷವಾದೀತು. ಮನಸ್ಸಿನ ಮೋಹ ಜೀವಕ್ಕೆ ಗಾಳವಾಗಿ ಸಂಕಷ್ಟಕ್ಕೆ ಸಿಲುಕಿಸಬಹುದು. ನಾವು ಮಾಡುವ ಕರ್ಮ ದೇಹ ಮತ್ತು ಮನಸ್ಸಿನ ಮೇಲೆ ಒಂದೇ ರೀತಿಯ ಪರಿಣಾಮ ಬೀರದು. ದೇಹಕ್ಕೆ ಮುದ ನೀಡಿದ್ದೆಲ್ಲವೂ ಆತ್ಮಕ್ಕೆ‌ ಸಂತೋಷವನ್ನುಂಟು ಮಾಡದು. ಆದ್ದರಿಂದ ಜೀವನದಲ್ಲಿ ದೇಹದ ಸುಖಕ್ಕಿಂತ ಆತ್ಮಕ್ಕೆ ಆಗುವ ಲಾಭವನ್ನು ಲೆಕ್ಕಹಾಕಬೇಕು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
‌‌ ದೇಹ ಮತ್ತು ಆತ್ಮ ನಮ್ಮ ಜೀವನದ ಎರಡು ಪ್ರಮುಖ ಅಂಗಗಳು. ದೇಹವನ್ನು ತಣಿಸುವ ತುತ್ತು ಮನಸ್ಸಿಗೆ ವಿಷಯವಾಗಿ ಪರಿಣಮಿಸಬಹುದು. ಬಾಹ್ಯ ಜಗತ್ತಿನ ವಸ್ತು, ವ್ಯಕ್ತಿ ಅಥವಾ ವಿಚಾರಗಳತ್ತ ಮಾರುಹೋಗುವ ಮನಸ್ಸು ಅದರಿಂದ ಆತ್ಮಕ್ಕೆ ಹಾನಿಯಾಗಬಹುದು.

ಬಾನಿಂದ ತಿರೆಯತ್ತ, ತಿರೆಯಿಂದ ಕಡಲತ್ತ|
ಕಡಲಿಂದ ಮತ್ತೆಲ್ಲೊ ಜಿಗಿಯುವುದು ಮನಸು||
ಯಾರಿತ್ತರೋ ಇಂಥ ಹುಚ್ಚುತನ ಈ ಎದೆಗೆ|
ಮನಸ್ಸು ಚಿತ್ರ ವಿಚಿತ್ರ||

ಎಂಬ ಕವಿವಾಣಿಯಂತೆ ಈ ವಿಚಿತ್ರವಾದ ಮನಸ್ಸು ಮೋಹ ಪಾಶಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಬೇಕು.
ಅರಸದಿರು ಆನಂದ ಪರಿಸರದ ಹೊರಗೆ ನೀ|
ಒಳಬದುಕಿನೊಂದು ಕ್ರಿಯೆ ಈ ಜೀವನಶಾಂತಿ||
ಇರುವುದನು ಪ್ರೀತಿಸುತ ಕಲಿತರಿದೆ ಸಂತೋಷ|
ನಿನೆದೆಯೆ ಸುಖತಾಣ!- ಮುದ್ದುರಾಮ||

ಎಂಬ ಕೆ. ಶಿವಪ್ಪನವರ ನುಡಿಯಂತೆ ನಮ್ಮ ಮನಸ್ಸನ್ನು ಹೊರ ಜಗತ್ತಿನ ಆಕರ್ಷಣೆಯಿಂದ ಸೆಳೆದು ನಮ್ಮ ಅಂತರಂಗದತ್ತ ತಿರುಗಿಸಬೇಕು. ಆಗಲೇ ನಿಜವಾದ ಬೇಳಕಿನ ದರ್ಶನವಾಗುವುದು. ನಮ್ಮ ನಿಜವಾದ ಸಂತೋಷದ ಮೂಲವಿರುವುದು ಅಂತರಂಗದ ಆತ್ಮತೃಪ್ತಿಯಲ್ಲಿ.
ನಿನ್ನೊಳಗೆ ಕಾಣು ನೀಂ ಲೋಕಸರ್ವಮಂ|
ನಿನ್ನನೇ ಕಾಣು ಪ್ರತಿಯೊಂದರಲ್ಲಿ||
ಭಿನ್ನವೆಂದರಿಯದಿರೆ ಯಾವುದಂ ಲೋಕದೊಳು||
ಉನ್ನತೋನ್ನತ ನೀನು||

ಎಂಬ ನಿಜಗುಣ ಕವಿಯ ಮಾತು ನಮಗೆ ಮಾದರಿಯಾಗಬೇಕು. ಹೀಗೆ ಮನಸ್ಸಿನ ಮುದಕ್ಕಿಂತ ಆತ್ಮಸಂತೋಷ ಮುಖ್ಯವೆಂದು ಭಾವಿಸಿ ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ.

Latest Articles

error: Content is protected !!