ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಪಟಾಕಿ ಅವಘಡಗಳು ಹೆಚ್ಚುತ್ತಿವೆ. ದೀಪಾವಳಿ ಹಬ್ಬದ ಮೊದಲ ದಿನವೇ ಪಟಾಕಿಯಿಂದ ಗಾಯಗೊಂಡು ರಾಜಾಜಿನಗರ ಬಳಿ ಇರುವ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ 7 ಜನರು ಚಿಕಿತ್ಸೆ ಪಡೆದಿದ್ದಾರೆ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಮೂವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. 15 ವರ್ಷದ ಬಾಲಕನ ಮುಖ ಸುಟ್ಟು ಹೋಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಪಟಾಕಿ ಅವಘಡದಿಂದಾಗಿ ಥಣಿಸಂದ್ರದ 7 ವರ್ಷದ ಬಾಲಕನ ಎಡಗಣ್ಣಿಗೆ ಹಾಗೂ ಫ್ರೇಜರ್ಟೌನ್ನ 7 ವರ್ಷದ ಬಾಲಕನ ಬಲಗಣ್ಣಿಗೆ ಹಾನಿಯಾಗಿದೆ. ಸದ್ಯ ಬಾಲಕರ ಕಣ್ಣಿಗೆ ಯಾವುದೇ ತೊಂದರೆ ಇಲ್ಲ ಎಂದು ಡಾ. ವಿದ್ಯಾ ತಿಳಿಸಿದ್ದಾರೆ.
ಕಣ್ಣಿನ ಸುರಕ್ಷತೆ ಬಗ್ಗೆ ಜನ ಜಾಗೃತಿ ಮತ್ತು ಸುರಕ್ಷತೆ ಸಂದೇಶ ಸಾರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕಣ್ಣಿನ ಚಿಕಿತ್ಸೆಗಾಗಿ ಹಾಸ್ಪಿಟಲ್ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆ ಚಿಕಿತ್ಸೆ ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದ್ದಾರೆ. ಪಟಾಕಿ ಹಚ್ಚುವ ವೇಳೆ ಉಂಟಾಗುವ ಅಪಘಾತಗಳ ಬಗ್ಗೆ ಜಾಗೃತಿ ಅಗತ್ಯ. ಪಟಾಕಿ ಅನಾಹುತ ಆಗೋದು ಮಕ್ಕಳಲ್ಲಿ ಹೆಚ್ಚು. ಹೀಗಾಗಿ ಪೋಷಕರು ಮುಂಜಾಗ್ರತೆ ವಹಿಸೋದು ಒಳ್ಳೆದ್ದು. ಕಣ್ಣಿಗೆ ಏನಾದರೂ ತೊಂದರೆಯಾದರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಆದಷ್ಟು ಪಟಾಕಿ ಸಿಡಿಸದೆ ಹಬ್ಬ ಮಾಡುವುದು ಆರೋಗ್ಯ ಮತ್ತು ಪರಿಸರಕ್ಕೆ ಒಳ್ಳೆಯದು ಎಂದು ಅವರು ತಿಳಿಸಿದರು.