ಮಣಿಪಾಲದಲ್ಲೊಂದು ವಿಸ್ಮಯಕಾರಿ ಘಟನೆ
ಉಡುಪಿ : ವೈದ್ಯರು ಬದುಕಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದ ಮಗುವೊಂದು ಕೊರಗಜ್ಜನ ಪ್ರಸಾದ ಹಚ್ಚಿದ ಕೂಡಲೇ ಚೇತರಿಸಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದ್ದು, ಇದು ಕೊರಗಜ್ಜನ ಪವಾಡವೆಂದೇ ಮಗುವಿನ ಪಾಲಕರು ಹೇಳುತ್ತಿದ್ದಾರೆ. ವೈದ್ಯರೇ ಮಗು ಬದುಕುವ ಭರವಸೆಯನ್ನು ನೀಡದ ಸಂದರ್ಭದಲ್ಲಿ ಮಗುವಿನ ಹೆತ್ತವರು ಕೊರಗಜ್ಜನಲ್ಲಿ ಪ್ರಾರ್ಥಿಸಿ ಹಣೆಗೆ ಕರಿಗಂಧ ಹಚ್ಚಿದ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯದಲ್ಲಿ ದಿಢೀರ್ ಚೇತರಿಕೆ ಕಂಡುಬಂದಿದೆ.
ಸಾಗರ ಮೂಲದ ನಾಗಶ್ರೀ ಎಂಬವರ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ವಿಪರೀತ ಜ್ವರ ಕಂಡು ಬಂದಿತ್ತು. ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೆ ಮಗು ಅಳು ನಿಲ್ಲಿಸುತ್ತಿರಲ್ಲಿಲ್ಲ. ಹೀಗಾಗಿ ಕುಂದಾಪುರದ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ಪತ್ರೆಯಲ್ಲಿ ಮಗುವಿಗೆ ಪಿಟ್ಸ್ ಇರುವುದಾಗಿಯೂ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಅಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಕೆಎಂಸಿಗೆ ದಾಖಲಿಸಲಾಗಿತ್ತು.
ಐಸಿಯುನಲ್ಲಿದ್ದ ಮಗುವಿನ ಅರೋಗ್ಯ ಚಿಂತಾಜನಕವಾಗಿತ್ತು. ಅಷ್ಟೇ ಅಲ್ಲ ಪದೇ ಪದೆ ಮಗುವಿನ ಹೃದಯ ಬಡಿತ ಏರುಪೇರಾಗುತ್ತಿರುವ ಬಗ್ಗೆ ವೈದರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವೈದರು ಪ್ರಯತ್ನ ಮಾಡುವುದಾಗಿಯೂ ಭರವಸೆ ನೀಡಿದರೂ ಮಗುವಿನ ಪ್ರಾಣ ಉಳಿಯುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಮಗುವಿನ ಪರಿಸ್ಥಿತಿ ಕಂಡ ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದರು.ಅಷ್ಟರಲ್ಲಿ ಅಸ್ಪತ್ರೆ ಬಳಿಯಿದ್ದ ಓರ್ವ ವ್ಯಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದ ಹಿನ್ನಲೆಯಲ್ಲಿ ಮಗುವಿನ ಹೆತ್ತವರು ಇಂದ್ರಾಳಿ ಎಂಜಿಎಂ ಹಾಸ್ಟೆಲ್ ಬಳಿಯಿರುವ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾದ ಪಡೆದು ತೆರಳಿದ್ದರು. ಕೊರಗಜ್ಜನ ಕರಿಗಂಧವನ್ನು ಮಗುವಿನ ಹಣೆಗೆ ಹಚ್ಚುತ್ತಿದ್ದಂತೆಯೇ, ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನ ಅರೋಗ್ಯ ದಿಢೀರಾಗಿ ಚೇತರಿಕೆ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು.

ವೈದರು ಕೂಡ ಪ್ರಯತ್ನಗಳನ್ನು ಮಾಡಿ ಮಗು ಬದುಕುಳಿಯುವಂತೆ ಮಾಡಿದ್ದಾರೆ. ಹೃದಯ ಬಡಿತವೇ ನಿಂತು ಹೋಯಿತು ಎಂದಿದ್ದ ಮಗು ಮತ್ತೆ ಕಿಲಕಿಲ ನಗುತ್ತಿರುವುದನ್ನು ಕಂಡ ಕುಟುಂಬಸ್ಥರ ಸಂತೋಷ ಮುಗಿಲು ಮುಟ್ಟಿದೆ. ಇದಕ್ಕೆಲ್ಲ ಕಾರಣ ಕೊರಗಜ್ಜ ಎನ್ನುವುದು ಕುಟುಂಬಸ್ಥರ ನಂಬಿಕೆ. ಹೀಗಾಗಿ ಅಸ್ಪತ್ರೆಯಿಂದ ನೇರವಾಗಿ ಇಂದ್ರಾಳಿ ಬಳಿಯ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಮಗುವನ್ನು ಕೊರಗಜ್ಜ ಸ್ವಾಮಿಯ ಮುಂದಿಟ್ಟು ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾದ ಪಡೆದುಕೊಂಡರು. ಈ ಮಗು ಕೊರಗಜ್ಜನ ಪ್ರಸಾದವೆಂದೇ ನಂಬಿ ಬದುಕುತ್ತೇವೆ ಎಂದು ಹೇಳುತ್ತಾ ಆನಂದಭಾಷ್ಪಗಳೊಂದಿಗೆ ತಮ್ಮೂರಿಗೆ ತೆರಳಿದ್ದಾರೆ.