ತೆಂಗಿನಮರದ ಬುಡದಲ್ಲಿ ಅಸ್ಥಿಪಂಜರ ಪತ್ತೆ

ಕುತೂಹಲ ಕೆರಳಿಸಿದ ಪ್ರಕರಣ; ವಿಧಿವಿಜ್ಞಾನ ಪರೀಕ್ಷೆ

ಪುತ್ತೂರು: ತೆಂಗಿನ ಮರದ ಬುಡದಲ್ಲಿ ವ್ಯಕ್ತಿಯ ತಲೆಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿರುವ ಪ್ರಕರಣ ಭಾರಿ ಕುತೂಹಲ ಕೆರಳಿಸಿದೆ. ಚಿಕ್ಕಮುಟ್ನೂರು ಗ್ರಾಮದ ಸಿದ್ಯಾಲದ ಗುಡ್ಡದಲ್ಲಿ ಶುಕ್ರವಾರ ಹುಲ್ಲು ಕಟಾವು ಮಾಡುವಾಗ ತೆಂಗಿನ ಮರದ ಬುಡದಲ್ಲಿ ಮನುಷ್ಯನ ತಲೆಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿತ್ತು.
ಸಿದ್ಯಾಲದ ದಿ| ಜೀವನ್‌ ಭಂಡಾರಿ ಎಂಬರಿಗೆ ಸೇರಿದ ಸ್ಥಳ ಇದಾಗಿದ್ದು, ಕೆಮ್ಮಾಯಿಯ ಶಿವಾನಂದ ನಾಯಕ್‌ ಎಂಬವರು ನೋಡಿಕೊಳ್ಳುತ್ತಿದ್ದರು. ಅ.21ರಂದು ಹುಲ್ಲು ಕಟಾವು ಮಾಡಿ ಸ್ಥಳ ಸ್ವಚ್ಛಗೊಳಿಸುತ್ತಿರುವಾಗ ಅಸ್ಥಿಪಂಜರ ಮತ್ತು ತಲೆಬುರುಡೆ ಪತ್ತೆಯಾಗಿದೆ. ಅಸ್ಥಿಪಂಜರವನ್ನು ಮೃತ ವ್ಯಕ್ತಿ ಧರಿಸಿದ್ದ ಬಟ್ಟೆ ಸುತ್ತುವರಿದಿತ್ತು. ಅಂಗಿಯ ಜೇಬಿನಲ್ಲಿ ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿಟ್ಟಿದ್ದ 100 ರೂ. ಮತ್ತು 50 ರೂ. ನೋಟು ಹಾಗೂ ಸ್ವಲ್ಪ ಚಿಲ್ಲರೆ ಹಣ ಇತ್ತು. ಸಮೀಪದಲ್ಲೇ ಒಂದು ಜೋಡಿ ಚಪ್ಪಲಿಯೂ ಪತ್ತೆಯಾಗಿದೆ.
ವಿಧಿ ವಿಜ್ಞಾನ ತಂಡ ಶನಿವಾರ ಈ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದೆ. ಡಿಎನ್‌ಎ ಪರೀಕ್ಷೆಯಿಂದ ಮೃತ ವ್ಯಕ್ತಿ ಯಾರೆಂದು ತಿಳಿಯಲಿದೆ. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೇ ಎಂಬ ಕುತೂಹಲ ಮೂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಭಾಗದಲ್ಲಿ ನಾಪತ್ತೆಯಾಗಿರುವವರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಪೈಕಿ 7 ತಿಂಗಳ ಹಿಂದೆ ಕೇಪುಳು ತಾರಿಗುಡ್ಡೆಯ ಯೂಸುಫ್‌ ಎಂಬ ವೃದ್ಧ ನಾಪತ್ತೆಯಾಗಿ ಇನ್ನೂ ಪತ್ತೆಯಾಗದಿರುವ ಮಾಹಿತಿ ಸಿಕ್ಕಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

Latest Articles

error: Content is protected !!