ಕಾರ್ಕಳ : ಹಾಲು ಉತ್ಪಾದನೆಯ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಕನಿಷ್ಠ 5 ರೂಪಾಯಿ ಏರಿಸುವಂತೆ ಒತ್ತಾಯಿಸಿ ಸರಕಾರಕ್ಕೆ ರಾಜ್ಯದ ರೈತ ಸಮುದಾಯವು ಬೇಡಿಕೆ ಹಾಗೂ ಮನವಿಯನ್ನು ಸಲ್ಲಿಸುತ್ತಿದ್ದರೂ ಕೂಡ ಸರಕಾರ ಯಾವುದೇ ರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದರಿಂದ ಉಡುಪಿ ಜಿಲ್ಲೆಯ ರೈತರು ಅಂಚೆ ಕಾರ್ಡ್ ಚಳುವಳಿಯ ಮೂಲಕ ವಿವಿಧ ಹಂತಗಳ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಹಾಲಿನ ದರ ಏರಿಸುವ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ವಿವೇಚನೆಗೆ ಅನುಗುಣವಾಗಿ ಸೂಕ್ತ ಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪತ್ರಿಕಾ ಹೇಳಿಕೆಯನ್ನು ನೀಡಿರುತ್ತಾರೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಮುಖ್ಯಮಂತ್ರಿ ನೆರವಾಗಬೇಕೆಂದು ಆಗ್ರಹಿಸುತ್ತಿದ್ದೇವೆ. ಉಡುಪಿ ಜಿಲ್ಲೆಯ 1 ಸಾವಿರ ರೈತ ಕುಟುಂಬಗಳು ಅಂಚೆ ಕಾರ್ಡ್ ನಲ್ಲಿ ಪತ್ರ ಬರೆದು ಮುಖ್ಯ ಮಂತ್ರಿಗಳಿಗೆ ರವಾನಿಸುವುದರೊಂದಿಗೆ ಸಹಕಾರ ಭಾರತಿ ಉಡುಪಿ ಜಿಲ್ಲೆಯಿಂದ ಇಡೀ ರಾಜ್ಯಾದ್ಯಂತ ರೈತಪರ ಹೋರಾಟವನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಭಾರತಿ ಹಾಲು ಪ್ರಕೋಸ್ಟ ಸಂಚಾಲಕ ನರಸಿಂಹ ಕಾಮತ್ ತಿಳಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಹಕಾರ ಭಾರತಿ ಜಿಲ್ಲಾ ಸಮಿತಿಯ ವತಿಯಿಂದ ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಹಾಲಿನ ದರ ಏರಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ನೀಡುವಂತೆ ನರಸಿಂಹ ಕಾಮತ್ ಮನವಿ ಮಾಡಿಕೊಂಡರು. ತಾಲೂಕು ಸಮಿತಿಯ ಮೂಲಕ ಆಯಾ ತಾಲೂಕುಗಳ ತಹಶೀಲ್ದಾರ್ ಮತ್ತು ಶಾಸಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಬೇಕು. ಮುಖ್ಯಮಂತ್ರಿಗಳಿಗೆ ಬರೆಯುವ ಮಾದರಿ ಅಂಚೆ ಕಾರ್ಡನ್ನು ವಾಟ್ಸಪ್ ಮೂಲಕ ಜಿಲ್ಲೆಯ ಎಲ್ಲಾ ಹೈನುಗಾರಿಕೆ ತಲುಪುವಂತೆ ಮಾಡಿ, ಸಹಕಾರ ಭಾರತಿ ಕಾರ್ಯಕರ್ತರು ಮತ್ತು ಹೈನುಗಾರ ರೈತರು ಪ್ರತಿ ಜಿಲ್ಲೆಯಿಂದ ಕನಿಷ್ಠ 5000 ಪೋಸ್ಟ್ ಕಾರ್ಡನ್ನು ಬರೆದು ಅಂಚೆಪೆಟ್ಟಿಗೆಗೆ ಹಾಕುವುದರ ಮೂಲಕ ಈ ಚಳವಳಿಗೆ ವೇಗವನ್ನು ನೀಡುವಂತೆ ಅವರು ವಿನಂತಿದರು.