ವಿರೋಧಕ್ಕೆ ಮಣಿದು ಆದೇಶ ಹಿಂದೆಗೆದುಕೊಂಡ ಸರಕಾರ
ಬೆಂಗಳೂರು : ಸರ್ಕಾರಿ ಶಾಲಾ ಮಕ್ಕಳ ಪಾಲಕರಿಂದ ಪ್ರತಿ ತಿಂಗಳು 100 ರೂ. ದೇಣಿಗೆ ಸಂಗ್ರಹಿಸುವ ನಿರ್ಧಾರಕ್ಕೆ ತೀವ್ರ ವ್ಯಕ್ತವಾದ ಬೆನ್ನಲ್ಲೇ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಶಾಲಾ ನಿರ್ವಹಣೆ ಹೆಸರಿನಲ್ಲಿ ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಯ ಪಾಲಕರಿಂದ 100 ರೂ. ಸಂಗ್ರಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದಕ್ಕೆ ಶಿಕ್ಷಣ ತಜ್ಞರು ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಕೂಡಲೇ ಆದೇಶ ವಾಪಸ್ ಪಡೆದಿದೆ.
ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅವರು ಈ ಆದೇಶ ವಾಪಸ್ ಪಡೆಯಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈ ಸುತ್ತೋಲೆ ಹಿಂಪಡೆದಿರುವ ಬಗ್ಗೆ ಮತ್ತೊಂದು ಆದೇಶ ಹೊರಬಿದ್ದಿದೆ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು ಶಾಲಾ ಅಭಿವೃದ್ಧಿಗಾಗಿ ದಾನ/ ದೇಣಿಗೆ ಸ್ವೀಕರಿಸುವ ಬಗ್ಗೆ ಹೊರಡಿಸಿದ್ದ ಸುತ್ತೋಲೆಯನ್ನು ತಕ್ಷಣದಿಂದ ಹಿಂಪಡೆಯಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.