Thursday, December 1, 2022
spot_img
Homeಸುದ್ದಿವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ನಿಧನ

ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ನಿಧನ

ಅನಾರೋಗ್ಯದಿಂದ 56ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ಸಜ್ಜನ ಮುಖಂಡ

ಬೆಂಗಳೂರು: ವಿಧಾನಸಭೆಯ ಉಪ ಸಭಾಪತಿ, ಸವದತ್ತಿ ಶಾಸಕ ಆನಂದ್ ಮಾಮನಿ (56) ಶನಿವಾರ ರಾತ್ರಿ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್ ಮಾಮನಿ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆನಂದ ಮಾಮನಿ ಅವರು ಕ್ಯಾನ್ಸರ್ ಕಾಯಿಲೆಯಿಂದಾಗಿ ಕೆಲ ದಿನಗಳಿಂದ ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಇತ್ತೀಚೆಗಷ್ಟೇ ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಆನಂದ್ ಮಾಮನಿ ಅವರು, ಶೀಘ್ರದಲ್ಲೇ ಗುಣಮುಖವಾಗಿ ಜನ ಸೇವೆ ಬರುತ್ತೇನೆ, ಯಾರು ಆತಂಕಪಡಬೇಡಿ. ಊಹಾಪೋಹಗಳಿಗೆ ಕಿವಿಗೊಡಬೇಡಿ ನಾನು ಚೆನ್ನಾಗಿದ್ದೇನೆ ಎಂದಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆನಂದ್ ಮಾಮನಿ ಅವರ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್​ ಮೂಲಕ ಸವದತ್ತಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
2008ರಲ್ಲಿ ಬಿಜೆಪಿ ಪಕ್ಷದಿಂದ ಮೊದಲ ಬಾರಿಗೆ ಸವದತ್ತಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಮತ್ತೆ 2013-2018 ರಲ್ಲಿ ಎರಡನೇ ಬಾರಿಗೆ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿದರು. 2018 ರಲ್ಲಿ ಮೂರನೇ ಬಾರಿಗೆ ಹ್ಯಾಟ್ರಿಕ್​ ವಿಜಯ ಸಾಧಿಸಿದರು. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ವಿಧಾನಸಭಾ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ತಂದೆ ಚಂದ್ರಶೇಖರ್ ಹಾದಿ ಹಿಡಿದ ಮಗ ಆನಂದ ಮಾಮನಿ
ಡೆಪ್ಯುಟಿ ಸ್ಪೀಕರ್ ಆಗಿದ್ದಾಗಲೇ ಅಂದು ತಂದೆ ತೀರಿಹೋಗಿದ್ದರು. ಇಂದು ಪುತ್ರ. 1995-1999 ಅವಧಿಯಲ್ಲಿ ದಿ. ಚಂದ್ರಶೇಖರ ಮಾಮನಿ ಅವರು ಉಪಸಭಾಧ್ಯಕ್ಷ ಸ್ಥಾನ ನಿಭಾಯಿಸಿದ್ದರು. ಅದೇ ಗತ್ತಿನಲ್ಲೇ ಆನಂದ ಮಾಮನಿ ಅವರು ಕೂಡ ಉಪಸಭಾಧ್ಯಕ್ಷ ಹುದ್ದೆ ನಿಭಾಯಿಸುತ್ತಿದ್ದರು. ಆದರೆ ಕಾಕತಾಳಿಯ ಎಂಬಂತೆ ತಂದೆ-ಮಗ ಇಬ್ಬರೂ ಉಪಸಭಾಧ್ಯಕ್ಷರಾಗಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ
ನಮ್ಮ ಪಕ್ಷದ ಶಾಸಕರು, ರಾಜ್ಯ ವಿಧಾ‌ನಸಭೆಯ ಮಾನ್ಯ ಉಪ ಸಭಾಧ್ಯಕ್ಷರಾದ ಆತ್ಮೀಯ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ‌. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!