ನವೆಂಬರ್‌ ತಿಂಗಳಾಂತ್ಯಕ್ಕೆ ಸುರತ್ಕಲ್‌ ಟೋಲ್‌ಗೇಟ್‌ ತೆರವು – ಸುನೀಲ್‌ ಕುಮಾರ್‌

ಉಡುಪಿ : ನನಗಿರುವ ಮಾಹಿತಿ ಪ್ರಕಾರ ನವೆಂಬರ್‌ ತಿಂಗಳಾಂತ್ಯಕ್ಕೆ ಸುರತ್ಕಲ್‌ ಟೋಲ್‌ಗೇಟ್‌ ತೆರವಾಗಲಿದೆ. ಈ ನಿಟ್ಟಿನಲ್ಲಿ ಪೂರಕ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಸುನೀಲ್‌ ಕುಮಾರ್‌ ಹೇಳಿದರು.
ಅವರು ಅ.22 ರಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರೊಂದಿಗೆ ಬ್ರಹ್ಮಗಿರಿಯ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

28 ಸಾವಿರ ಅರ್ಜಿ
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾರ್ವಜನಿಕರಿಂದ 28 ಸಾವಿರ ಅರ್ಜಿ ಬಂದಿದೆ. ಅದರಲ್ಲಿ 35 ಕಲಾ ಪ್ರಕಾರಗಳ ತೆರೆಮರೆಯ ಸಾಧಕರನ್ನು ಗುರುತಿಸುವಂತೆ ಆಯ್ಕೆ ಸಮಿತಿಗೆ ಸೂಚಿಸಲಾಗಿದೆ. ಯಾವುದೇ ಒತ್ತಡ ಮತ್ತು ಲಾಬಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಈ ತಿಂಗಳ 29 ಅಥವಾ 30 ರಂದು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಕಾಂತಾರ ಸಿನೆಮಾದ ಬಗ್ಗೆ ಚಿತ್ರನಟ ಚೇತನ್ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಮಗೆ ದೈವಾರಾಧನೆ ಮೇಲೆ ನಂಬಿಕೆ ಇದೆ. ಕಾಂತಾರ ಸಿನೆಮಾದಿಂದ ತುಳು ಸಂಸ್ಕೃತಿ ಮೇಲಿನ ಗೌರವ ದೇಶದಾದ್ಯಂತ ಹೆಚ್ಚಿದೆ. ಆದರೆ ನಂಬಿಕೆ, ಶ್ರದ್ದೆ, ಸಂಸ್ಕೃತಿ ಇಲ್ಲದವರಿಂದ ಆಕ್ಷೇಪ ಬಂದಿದೆ ಎಂದರು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಈಗಾಗಲೇ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ದಾಖಲೆಗಳನ್ನು ಕಾನೂನು ವಿಭಾಗಕ್ಕೆ ನೀಡಲಾಗಿದ್ದು, ಶೀಘ್ರ ತುಳು ರಾಜ್ಯ ಭಾಷೆಯಾಗಿ ಘೋಷಣೆಯಾಗಲಿದೆ ಎಂದು ತಿಳಿಸಿದರು.

3.50 ಲಕ್ಷ ರೈತರಿಗೆ ಉಚಿತ ವಿದ್ಯುತ್‌
ರಾಜ್ಯದ 3.50 ಲಕ್ಷ ರೈತರಿಗೆ ಉಚಿತವಾಗಿ ಸೌರ ವಿದ್ಯುತ್ ಪೂರೈಕೆ ಮಾಡುವ ಕುಸುಮ್ ಸೀ ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ರಾಜ್ಯದಲ್ಲಿ 1,000 ಮೆಗವ್ಯಾಟ್ ಸಾಮರ್ಥ್ಯದ 1,000 ಪ್ರತ್ಯೇಕ ಸೋಲರ್ ಫೀಡರ್ ಗಳನ್ನು ಸ್ಥಾಪನೆ ಮಾಡಲಾಗುವುದು. ಅವುಗಳಿಂದ ನೇರವಾಗಿ ರೈತರ ಪಂಪ್ ಸೆಟ್‌ ಗಳಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು. ರೈತರ 7 ಗಂಟೆಯ ವಿದ್ಯುತ್ ಪೂರೈಕೆ ಬೇಡಿಕೆ ಈ ಮೂಲಕ ಈಡೇರಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪತ್ರಿಕಾ ಭವನ ಸಂಚಾಲಕ ಅಜಿತ್ ಆರಾಡಿ, ಕಿರಣ್ ಮಂಜನ್ ಬೈಲ್, ಉಮೇಶ್ ಮಾರ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Latest Articles

error: Content is protected !!