ಆರೋಗ್ಯಧಾರಾ – ಆರೋಗ್ಯಕ್ಕೆ ಆಯುರ್ವೇದ ಸೂತ್ರಗಳು

ಆಯುರ್ವೇದದ ಪ್ರಕಾರ ವಾತ, ಪಿತ್ತ, ಕಫ ದೋಷಗಳು ಸಮವಾಗಿರುವುದು, ಜಠರಾಗ್ನಿಯು ಸರಿಯಾಗಿ ಕೆಲಸ ಮಾಡುವುದು, ಸಪ್ತ ಧಾತುಗಳು ಎಂದರೆ ರಸ, ರಕ್ತ, ಮಾಂಸ, ಅಸ್ಥಿ, ಮಜ್ಜ, ಮೇಧ, ಶುಕ್ರ ಇವುಗಳು ಸಮವಾಗಿರುವುದು, ಪ್ರಸನ್ನ ಆತ್ಮ ಹಾಗೂ ಮನಸ್ಸು, ಇಂದ್ರಿಯಗಳು ಇವೆಲ್ಲವೂ ಯಾರಲ್ಲಿ ಇರುತ್ತದೆಯೋ ಅವರು ಸ್ವಸ್ಥರು ಎಂದು ಹೇಳಲಾಗಿದೆ.
ಆರೋಗ್ಯವಂತರಾಗಿರಲು ದೇಹ ಮಾತ್ರವಲ್ಲ ಮನಸ್ಸು ಕೂಡ ಆರೋಗ್ಯದಿಂದಿರಬೇಕು. ಆರೋಗ್ಯವನ್ನು ಆಯುವನ್ನು ವೃದ್ಧಿಸುವ ವಿಧಾನವನ್ನು ವಿಸ್ತಾರವಾಗಿ ಆಯುರ್ವೇದದಲ್ಲಿ ಹೇಳಿದೆ.

ಇಲ್ಲಿವೆ ಕೆಲವು ಆರೋಗ್ಯ ಸೂತ್ರಗಳು
ದಿನಚರ್ಯ – ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಾಡಬೇಕಾದ ನಿಯಮಗಳನ್ನು ದಿನಚರ್ಯ ಎಂದು ಕರೆಯುತ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಸಾಕು ನಮ್ಮ ಆರೋಗ್ಯ ಸುಧಾರಿಸಿ ದೇಹಬಲ ಹಾಗೂ ಮಾನಸಿಕ ಬಲವನ್ನು ಹೆಚ್ಚಿಸುತ್ತದೆ. ಉತ್ಸಾಹವನ್ನು ನೀಡುತ್ತದೆ. ಧ್ಯಾನ, ಯೋಗ, ಪ್ರಾಣಾಯಾಮವನ್ನು ರೂಢಿಸಿಕೊಂಡರೆ ಅನೇಕ ಕಾಯಿಲೆಗಳು ದೂರ ಸರಿಯುತ್ತದೆ. ಅಭ್ಯಂಗ ಸ್ನಾನವನ್ನು ವಿಶೇಷವಾಗಿ ಆಯುರ್ವೇದದಲ್ಲಿ ಹೇಳಿದೆ. ದಿನಾಲು ಆಗದಿದ್ದರೆ ವಾರಕ್ಕೊಮ್ಮೆಯಾದರೂ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ. ಮೈಕೈ ನೋವು, ಅನೇಕ ತ್ವಚೆಯ ಕಾಯಿಲೆಗಳನ್ನು ತಡೆಯಬಹುದು.
ಆಹಾರವಿಧಿ – ಮುಂಜಾನೆಯ ಉಪಾಹಾರ ಕೊಂಚ ಕಡಿಮೆ ಮಾಡಿದರೆ ಒಳ್ಳೆಯದು. ಮಧ್ಯಾಹ್ನದ ಊಟ ಜಾಸ್ತಿ ಪ್ರಮಾಣ ಮಾಡಬಹುದು. ರಾತ್ರಿಯ ಆಹಾರ ಸೂರ್ಯಾಸ್ತದ ಮೊದಲು ಆದರೆ ಹಿತಕರ. ರಾತ್ರಿ ಆಹಾರವನ್ನು ಸೇವಿಸಿದರೆ ಜೀರ್ಣವಾಗುವುದಿಲ್ಲ. ಆಹಾರ ಸೇವಿಸುವಾಗ ಮೊಬೈಲ್ ಅಥವಾ ಟಿವಿಯನ್ನು ವೀಕ್ಷಿಸದೆ ಬರಿ ಆಹಾರದ ಮೇಲೆ ಲಕ್ಷ್ಯವಿಟ್ಟು ಸೇವಿಸಬೇಕು. ಮನಸ್ಸು ಶಾಂತವಾಗಿರಬೇಕು. ದುಃಖ, ಕೋಪ ಮಾಡಬಾರದು. ಆಹಾರ ಸೇವಿಸುವಾಗ ಮೊದಲು ಸಿಹಿ ರಸವುಳ್ಳ ಆಹಾರ ನಂತರ ಹುಳಿ, ಕಹಿ, ಖಾರ, ಲವಣಯುಕ್ತ ಆಹಾರ, ಕೊನೆಯಲ್ಲಿ ಕಷಾಯ ರಸಯುಕ್ತ ಆಹಾರವನ್ನು ಕ್ರಮೇಣ ಸೇವಿಸಬೇಕು. ಷಡ್ರಸ ಯುಕ್ತ ಆಹಾರ ಸೇವನೆ ಶ್ರೇಷ್ಠ.
ನಿದ್ರೆ – ಆಹಾರ ಎಷ್ಟು ಮುಖ್ಯವೋ ನಿದ್ರೆಯು ಅಷ್ಟೇ ಮುಖ್ಯ. ದೇಹಕ್ಕೆ ಅಂಗಾಂಗಗಳಿಗೆ ವಿಶ್ರಾಂತಿಯ ಅವಶ್ಯಕತೆವಿರುತ್ತದೆ. ಚಯಾಪಚಯ ಕ್ರಿಯೆಯೂ ಕೂಡ ಸರಿಯಾಗಿ ನಿರ್ವಹಿಸಲು ನಿದ್ರೆಯು ಬೇಕೇಬೇಕು. ಮಾನಸಿಕ ಆರೋಗ್ಯಕ್ಕೆ ನಿದ್ರೆಯು ಸಹಾಯಕಾರಿ. ಆದರೆ ಆಯುರ್ವೇದದಲ್ಲಿ ಮಧ್ಯಾಹ್ನ ನಿದ್ರೆಯೂ ನಿಷೇಧಿಸಲಾಗಿದೆ. ರೋಗಿ, ಮಕ್ಕಳು, ವೃದ್ಧರು, ದೈಹಿಕ ಶ್ರಮಜೀವಿಗಳೂ ಮಧ್ಯಾಹ್ನ ಸ್ವಲ್ಪ ಹೊತ್ತು ನಿದ್ದೆ ಮಾಡಬಹುದು.
ಋತುಚರ್ಯ – ಪರಿಸರದಲ್ಲಿ ಬದಲಾವಣೆ ಆದಾಗ ಅದೇ ಸಮಯದಲ್ಲಿ ನಮ್ಮ ದೇಹದಲ್ಲಿಯೂ ಕೂಡ ಬದಲಾವಣೆ ಆಗುತ್ತಿರುತ್ತದೆ. ಪ್ರತೀ ಋತುವಿನಲ್ಲಿ ಕೆಲವು ನಿಯಮಗಳನ್ನು ಅನುಸರಿಸಲು ಹೇಳಲಾಗಿದೆ. ಅದನ್ನು ಋತುಚರ್ಯವೆಂದು ಹೇಳುತ್ತಾರೆ. ಬೇಸಿಗೆಯಲ್ಲಿ ಜೀರ್ಣಕ್ರಿಯೆಯೂ ಮಂದವಿರುತ್ತದೆ. ಮಳೆಗಾಲದಲ್ಲಿ ಮಧ್ಯಮ ಹಾಗೂ ಚಳಿಗಾಲದಲ್ಲಿ ಜೀರ್ಣಕ್ರಿಯೆ ಉತ್ತಮವಿರುತ್ತದೆ. ಆದ್ದರಿಂದ ಋತುವಿಗೆ ತಕ್ಕಂತೆ ಆಹಾರ ಸೇವನೆ ಮಾಡಿರಿ.

ಆಯುರ್ವೇದ ಔಷಧ ಸೇವನೆಗೆ ಸೂಚನೆ
ಆಯುರ್ವೇದ ಔಷಧದಲ್ಲಿ ಅಡ್ಡಪರಿಣಾಮ ಇಲ್ಲ ಎಂದು ಪ್ರಚಲಿತವಾಗಿದೆ. ಆದರೆ ಯಾವುದೇ ಆಯುರ್ವೇದ ಔಷಧಿಗಳನ್ನು ವೈದ್ಯರನ್ನು ಕೇಳದೇ ಸೇವಿಸಬೇಡಿ. ಆಯುರ್ವೇದ ವೈದ್ಯರು ನಿಮ್ಮ ದೇಹ ಪ್ರಕೃತಿಗೆ ಅನುಸಾರವಾಗಿ, ಋತುಗಳಿಗೆ ಅನುಸಾರ, ರೋಗವನ್ನು ಪರಿಶೀಲಿಸಿ ಔಷಧವನ್ನು ನೀಡುತ್ತಾರೆ. ಆಯುರ್ವೇದ ಔಷಧರೂಪಗಳಾದ ವಟಿ, ಕಷಾಯ, ಘೃತ, ಅವಲೇಹ, ಅರಿಷ್ಠ, ಆಸವ, ರಸೌಷಧಿಗಳನ್ನು ನೀವಾಗಿ ಸೇವಿಸುವಂಥದ್ದು ಅಲ್ಲ. ಪ್ರತಿ ಆಯುರ್ವೇದ ಔಷಧಕ್ಕೆ ಅದರದ್ದೇ ಆದ ಸೇವನೆಯ ಪ್ರಮಾಣ, ಅನುಪಾನ (ಯಾವುದರ ಜೊತೆ ಸೇವನೆ)ವಿರುತ್ತದೆ. ಕೆಲವು ಔಷಧಗಳು ನಿರಂತರವಾಗಿ ಸೇವಿಸಕೂಡದು. ಕೆಲವು ಔಷಧಿಗಳು ಕಿಂಚಿತ್ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಆದ್ದರಿಂದ ಸೆಲ್ಫ್ ಮೆಡಿಕೇಶನ್ ಯಾವತ್ತೂ ಮಾಡಬೇಡಿ. ಆರೋಗ್ಯದ ದೃಷ್ಟಿಯಿಂದ ಇದನ್ನು ಹೇಳಲೇಬೇಕಾದದ್ದು ನನ್ನ ಕರ್ತವ್ಯ.

ಡಾ. ಹರ್ಷಾ ಕಾಮತ್

Latest Articles

error: Content is protected !!