ನಿಯಮ ಉಲ್ಲಂಘಿಸಿದರೆ 1,000 ರೂ. ದಂಡ ವಿಧಿಸಲು ಆದೇಶ
ಬೆಂಗಳೂರು: ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿಯೂ ಸೀಟ್ ಬೆಲ್ಟ್ ಕಡ್ಡಾಯ ಮಾಡಿದೆ. ಕಾರಿನ ಹಿಂಬದಿ ಸವಾರರು ಸೀಟ್ ಬೆಲ್ಟ್ ಧರಿಸಬೇಕು, ಇಲ್ಲದಿದ್ದರೆ 1,000 ರೂಪಾಯಿ ದಂಡ ಕಟ್ಟಲು ತಯಾರಿರಬೇಕು.
ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ, ವಾಹನದ ಹಿಂಬದಿಯ ಆಸನಗಳಲ್ಲಿ ಕುಳಿತಿರುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್‌ಗಳನ್ನು ಧರಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿ ಆದೇಶಿಸಿದೆ. ಆದೇಶದ ಉಲ್ಲಂಘನೆಯಾದರೆ ಪೊಲೀಸರು 1,000 ರೂಪಾಯಿ ದಂಡ ವಿಧಿಸುತ್ತಾರೆ ಎಂದು ಕರ್ನಾಟಕ ಪೊಲೀಸರು ಬುಧವಾರ ಆದೇಶ ಹೊರಡಿಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪೊಲೀಸ್ ಇಲಾಖೆ ದಂಡವನ್ನು 500 ರಿಂದ 1 ಸಾವಿರ ರೂಪಾಯಿಗೆ ಏರಿಸಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) (ರಸ್ತೆ ಸುರಕ್ಷತೆ) ಆರ್ ಹಿತೇಂದ್ರ ಹೊರಡಿಸಿರುವ ಆದೇಶದ ಪ್ರತಿಯಲ್ಲಿ, ಎಲ್ಲಾ ಪೊಲೀಸ್ ಕಮಿಷನರೇಟ್‌ಗಳು ಮತ್ತು ಎಸ್‌ಪಿಗಳಿಗೆ ಆದೇಶವನ್ನು ಅನುಸರಿಸಲು ತಿಳಿಸಲಾಗಿದೆ.
ಸೆಪ್ಟೆಂಬರ್ 4 ರಂದು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವು ದೇಶದಲ್ಲಿ ಸೀಟ್ ಬೆಲ್ಟ್‌ಗಳ ಪ್ರಾಮುಖ್ಯತೆಯ ಮೇಲೆ ಮತ್ತೆ ಗಮನ ಹರಿಸುವಂತೆ ಮಾಡಿದೆ. ಅಪಘಾತ ಸಂಭವಿಸಿದ ಕೆಲ ದಿನಗಳ ನಂತರ ಕೇಂದ್ರ ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡುವಂತೆ ಪತ್ರ ಬರೆದಿದೆ.
ಪ್ರಯಾಣಿಕರ ಸಂಖ್ಯೆ 8 ಮೀರದಂತೆ ಇರುವ ವಾಹನಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಕಾರು, ಖಾಸಗಿ ಬಾಡಿಗೆ ವಾಹನಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಕೂಡ ಸೀಟ್ ಬೆಲ್ಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು.